Homeಬೆಂಗಳೂರುಹೊಸ ಎಸ್‌‍ಐಆರ್‌ನಲ್ಲಿರುವ ಮತದಾರರ ಪಟ್ಟಿಯಂತೆ ಜಿಬಿಎ ಚುನಾವಣೆ..?

ಹೊಸ ಎಸ್‌‍ಐಆರ್‌ನಲ್ಲಿರುವ ಮತದಾರರ ಪಟ್ಟಿಯಂತೆ ಜಿಬಿಎ ಚುನಾವಣೆ..?

ಬೆಂಗಳೂರು, ಅ.23- ಅಂತೂ ಇಂತೂ ಜಿಬಿಎಗೆ ಚುನಾವಣೆ ನಡೆಯುವುದು ಪಕ್ಕಾ ಎಂಬ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಮತದಾನಕ್ಕೆ ಹೊಸ ಎಸ್‌‍ಐಆರ್‌ ಪಟ್ಟಿಯನ್ನೇ ಆಧರಿಸಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಸುಪ್ರೀಂ ಕೋರ್ಟ್‌ ಸೂಚನೆಯಂತೆ ಬರುವ ಡಿಸೆಂಬರ್‌ 30ರೊಳಗೆ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಿದ್ಧತೆಗಳನ್ನು ಚುರುಕುಗೊಳಿಸಿದೆ.

ಇದೇ ವೇಳೆ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಇಂದಿಗೆ ಮುಕ್ತಾಯಗೊಳ್ಳಲಿದ್ದು,ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್‌ 27ರಂದು ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ.ಎಸ್‌‍ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಜಿಬಿಎ ವ್ಯಾಪ್ತಿಯಲ್ಲಿ ನಡೆಯಲಿರುವುದರಿಂದ, ಈ ಬಾರಿಯ ಚುನಾವಣೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿಯೇ ನಿರ್ಣಾಯಕವಾಗಲಿದೆ ಎಂಬ ಗುಸು ಗುಸು ಆರಂಭವಾಗಿದೆ.

ಇದರಿಂದಾಗಿ ಹಳೆಯ ಮತದಾರರ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಿದ್ದ ರಾಜಕೀಯ ಪಕ್ಷಗಳಿಗೆ ಹೊಸ ಪಟ್ಟಿ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.1.04 ಕೋಟಿಯಿಂದ 60 ಲಕ್ಷಕ್ಕೆ ಇಳಿಕೆ!:ಹಳೆಯ ಮತದಾರರ ಪಟ್ಟಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಸುಮಾರು 1.04 ಕೋಟಿ ಮತದಾರರಿದ್ದರು ಎಂದು ಅಂದಾಜಿಸಲಾಗಿತ್ತು. ಆದರೆ, ಎಸ್‌‍ಐಆರ್‌ ಪ್ರಕ್ರಿಯೆಯ ಬಳಿಕ ಸಿದ್ಧಪಡಿಸಲಾಗಿರುವ ಹೊಸ ಪಟ್ಟಿಯಲ್ಲಿ ಸುಮಾರು 60 ಲಕ್ಷ ಮತದಾರರ ಹೆಸರುಗಳು ಮಾತ್ರ ಉಳಿದಿವೆ ಎಂದು ಅಧಿಕಾರಿಗಳ ಮಾಹಿತಿ ತಿಳಿಸಿದೆ.

ಹಳೆಯ ಪಟ್ಟಿಗೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮೃತಪಟ್ಟವರು, ಮನೆ ಬದಲಾಯಿಸಿದವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರು ಸೇರಿದಂತೆ ವಿವಿಧ ಕಾರಣಗಳಿಂದ ಅನರ್ಹ ಹಾಗೂ ಪುನರಾವರ್ತಿತ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ.ಆದರೆ, ಮತದಾರರ ಸಂಖ್ಯೆಯಲ್ಲಿನ ಇಳಿಕೆಗೆ ಸಂಬಂಧಿಸಿದಂತೆ ಅಂತಿಮ ಪಟ್ಟಿಯಲ್ಲಿನ ಅಧಿಕೃತ ಅಂಕಿ-ಅಂಶಗಳೇ ಸ್ಪಷ್ಟ ಚಿತ್ರಣ ನೀಡಲಿವೆ. ಹೀಗಾಗಿ, ಅಕ್ಟೋಬರ್‌ 27ರಂದು ಪ್ರಕಟವಾಗಲಿರುವ ಅಂತಿಮ ಪಟ್ಟಿಯ ಮೇಲೆ ಎಲ್ಲರ ಗಮನ ನೆಟ್ಟಿದೆ.

ರಾಜಕೀಯ ಪಕ್ಷಗಳಿಗೆ ಹೊಸ ಸವಾಲು:ಹಳೆಯ ಮತದಾರರ ಪಟ್ಟಿಯನ್ನೇ ಆಧರಿಸಿ ಚುನಾವಣಾ ಲೆಕ್ಕಾಚಾರ ಹಾಕುತ್ತಿದ್ದ ರಾಜಕೀಯ ಪಕ್ಷಗಳಿಗೆ ಪರಿಷ್ಕೃತ ಪಟ್ಟಿ ಹೊಸ ಸವಾಲು ತಂದಿದೆ. ವಾರ್ಡ್‌ವಾರು ಮತದಾರರ ಸಂಖ್ಯೆಯಲ್ಲಿ ಆಗಿರುವ ಬದಲಾವಣೆ, ಹೆಸರುಗಳ ಸೇರ್ಪಡೆ ಮತ್ತು ಕೈಬಿಟ್ಟಿರುವ ವಿವರಗಳು ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಕೆಯ ಮೇಲೂ ಪರಿಣಾಮ ಬೀರಬಹುದು.

ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ ನಿಗದಿಪಡಿಸಿರುವ ಗಡುವಿನೊಳಗೆ ಚುನಾವಣೆ ನಡೆಸಬೇಕಿರುವುದರಿಂದ ರಾಜ್ಯ ಚುನಾವಣಾ ಆಯೋಗವೂ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಚುನಾವಣಾ ಪ್ರಕ್ರಿಯೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

ಹೊಸ ಪಟ್ಟಿಯೇ ಚುನಾವಣೆಗೆ ಆಧಾರ:ಎಸ್‌‍ಐಆರ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯ ಅನ್ವಯವೇ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.ಹೀಗಾಗಿ, ಹೊಸ ಮತದಾರರ ಪಟ್ಟಿಯೇ ಈ ಬಾರಿಯ ಜಿಬಿಎ ಚುನಾವಣೆಯ ಪ್ರಮುಖ ಆಧಾರವಾಗಲಿದೆ.

ಒಟ್ಟಿನಲ್ಲಿ, ಚುನಾವಣೆ ನಡೆಸಲು ನ್ಯಾಯಾಲಯದ ಗಡುವು, ಚುನಾವಣಾ ಆಯೋಗದ ಸಿದ್ಧತೆ ಮತ್ತು ಮತದಾರರ ಪಟ್ಟಿಯಲ್ಲಿನ ಭಾರಿ ಬದಲಾವಣೆಗಳು ಜಿಬಿಎ ಚುನಾವಣೆಯನ್ನು ಮತ್ತಷ್ಟು ಕುತೂಹಲದ ಘಟ್ಟಕ್ಕೆ ಕೊಂಡೊಯ್ದಿವೆ. ಅಕ್ಟೋಬರ್‌ 27ರಂದು ಪ್ರಕಟವಾಗುವ ಅಂತಿಮ ಮತದಾರರ ಪಟ್ಟಿಯ ಬಳಿಕ ಚುನಾವಣಾ ಚಿತ್ರಣ ಇನ್ನಷ್ಟು ಸ್ಪಷ್ಟವಾಗಲಿದೆ.

RELATED ARTICLES
spot_img

Latest News