Homeಬೆಂಗಳೂರುಪುಲಿಕೇಶಿ ನಗರ ಸ್ಫೋಟ ಪ್ರಕರಣ : ಸ್ಫೋಟಕಗಳನ್ನು ಪಾರ್ಸಲ್‌ ಕಳಿಸಿದ ವ್ಯಕ್ತಿಗಾಗಿ ಪೊಲೀಸರ ಶೋಧ

ಪುಲಿಕೇಶಿ ನಗರ ಸ್ಫೋಟ ಪ್ರಕರಣ : ಸ್ಫೋಟಕಗಳನ್ನು ಪಾರ್ಸಲ್‌ ಕಳಿಸಿದ ವ್ಯಕ್ತಿಗಾಗಿ ಪೊಲೀಸರ ಶೋಧ

ಬೆಂಗಳೂರು, ಅ.23- ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ಗೆ ಸ್ಫೋಟದ ಮುನ್ನ ಕರೆ ಮಾಡಿದ ಅನಾಮಧೇಯ ವ್ಯಕ್ತಿ ಹಾಗೂ ಸ್ಫೋಟಕಗಳನ್ನು ಪಾರ್ಸಲ್‌ ಕಳುಹಿಸಿದ ವ್ಯಕ್ತಿಗಾಗಿ ಪೂರ್ವ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.ಕಟ್ಟಡಕ್ಕೆ ಪಾರ್ಸಲ್‌ ಬಂದಿದೆ, ಅದನ್ನು ತೆಗೆದುನೋಡಿ ಎಂದು ಅನಾಮಧೇಯ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡ್‌ಗೆ ಕರೆ ಮಾಡಿ ತಿಳಿಸಿದ್ದಾನೆ. ಅದರಂತೆ ಸೆರ್ಕ್ಯೂರಿಟಿ ಗಾರ್ಡ್‌ ಮತ್ತು ಪೈಂಟರ್‌ ಪಾರ್ಸಲ್‌ಅನ್ನು ತೆರೆದಾಗ ಸ್ಫೋಟಗೊಂಡಿದೆ. ಪರಿಣಾಮ ಅವರಿಬ್ಬರೂ ಗಾಯಗೊಂಡಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ನನ್ನು ವಿಚಾರಣೆಗೊಳಪಡಿಸಿ ಕರೆ ಮಾಡಿದ ಅನಾಮಧೇಯ ವ್ಯಕ್ತಿ ಬಗ್ಗೆ ತಂಡವೊಂದು ಮಾಹಿತಿ ಪಡೆದುಕೊಂಡು ಕಾರ್ಯಾಚರಣೇ ಕೈಗೊಂಡಿದೆ. ಮತ್ತೊಂದು ತಂಡ ಕಟ್ಟಡಕ್ಕೆ ಪಾರ್ಸಲ್‌ ಕಳುಹಿಸಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದೆ.

ಕರೆ ಮಾಡಿದ ಅನಾಮಧೇಯ ವ್ಯಕ್ತಿ, ಕಟ್ಟಡಕ್ಕೆ ಪಾರ್ಸಲ್‌ ಕಳುಹಿಸಿದ ವ್ಯಕ್ತಿ ಒಬ್ಬನೇ? ಅಥವಾ ಬೇರೆ ಬೇರೆ ಇದ್ದಾರೆಯೇ? ಎಂಬುದರ ಬಗ್ಗೆ ತಂಡಗಳು ಪರಿಶೀಲನೆ ನಡೆಸುತ್ತಿವೆ. ಈ ಪ್ರಕರಣ ಭೇದಿಸಲು ರಚಿಸಲಾಗಿರುವ ಪೂರ್ವ ವಿಭಾಗದ ಐದು ವಿಶೇಷ ತಂಡಗಳು 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿದರೂ ನಿಖರ ಮಾಹಿತಿ ತಿಳಿದುಬಂದಿಲ್ಲ.

ಕಟ್ಟಡದ ಮಾಲೀಕ, ಗುತ್ತಿಗೆದಾರ ಅವರನ್ನೂ ಸಹ ವಿಶೇಷ ತಂಡಗಳು ವಿಚಾರಣೆಗೊಳಪಡಿಸಿ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ. ಸ್ಫೋಟದಲ್ಲಿ ಯಾವ, ಯಾವ ರಾಸಾಯನಿಕ ವಸ್ತುಗಳನ್ನು ಬಳಸಲಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಫ್ರೇಜರ್‌ಟೌನ್‌ ಠಾಣೆ ಪೊಲೀಸರು ಎಫ್‌ಎಸ್‌‍ಎಲ್‌ ವರದಿಗಾಗಿ ಕಾಯುತ್ತಿದ್ದಾರೆ. ಈ ಸ್ಫೋಟ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆಗಿದೆಯೇ? ಅಥವಾ ದುಷ್ಕರ್ಮಿಗಳ ಕೃತ್ಯವೇ? ಎಂಬಿತ್ಯಾದಿ ವಿವಿಧ ಆಯಾಮಗಳಲ್ಲಿ ತಂಡಗಳು ತನಿಖೆ ನಡೆಸುತ್ತಿವೆ.

RELATED ARTICLES
spot_img

Latest News