ಬೆಂಗಳೂರು,ಅ.23- ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಬಂದ ವಲಸಿಗರು ಇದೀಗ ಉಂಡ ಮನೆಗೆ ಕನ್ನ ಹಾಕಿದರು ಎಂಬಂತೆ ಅನ್ನ ನೀಡಿದ ಬೆಂಗಳೂರನ್ನೇ ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ಹುಚ್ಚುತನ ಪ್ರದರ್ಶಿಸುತ್ತಿದ್ದಾರೆ.
ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ದೇಶದ ವಿವಿಧ ಭಾಗಗಳ ಜನರನ್ನು ತನ್ನತ್ತ ಆಕರ್ಷಿಸುತ್ತಿರುವ ಬೆಂಗಳೂರಿನಲ್ಲಿ ಭಾಷೆಯ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.ಕನ್ನಡ ಮತ್ತು ಕನ್ನಡಿಗರ ವಿಚಾರವಾಗಿ ಆಗಾಗ್ಗೆ ವಿವಾದಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರನ್ನು ದೆಹಲಿಯ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ ಬೇಡಿಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಣಿಸಿಕೊಂಡಿದೆ.
ಬೆಂಗಳೂರಿನಲ್ಲಿ ಭಾಷೆಯ ವಿಚಾರವಾಗಿ ನಡೆಯುತ್ತಿರುವ ಗಲಾಟೆಗಳು ನಿಲ್ಲಬೇಕಾದರೆ ನಗರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದೊಂದೇ ಪರಿಹಾರ ಎಂಬ ಅಭಿಪ್ರಾಯವನ್ನು ಕೆಲವರು ಎಕ್್ಸನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ದೆಹಲಿಯ ಮಾದರಿಯಲ್ಲಿ ಬೆಂಗಳೂರನ್ನೂ ಎರಡನೇ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದರೆ ಭಾಷಾ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ವಾದವನ್ನು ಮುಂದಿಡುತ್ತಿದ್ದಾರೆ.ಆದರೆ, ಈ ಅಭಿಪ್ರಾಯಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಕಡೆಗಣಿಸಿ ಇಂತಹ ಬೇಡಿಕೆಗಳನ್ನು ಮುಂದಿಡುವುದು ಸರಿಯಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಬೆಳವಣಿಗೆಯಲ್ಲಿ ಕನ್ನಡಿಗರ ಕೊಡುಗೆ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಮರೆಯಬಾರದು ಎಂದು ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.ಭಾಷೆಯ ವಿಚಾರವಾಗಿ ಮತ್ತೆ ಸಂಘರ್ಷಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಯಿಂದ ಬೆಂಗಳೂರು ದೇಶದ ಪ್ರಮುಖ ಉದ್ಯೋಗ ಕೇಂದ್ರವಾಗಿ ಬೆಳೆದಿದೆ. ಇದರ ಪರಿಣಾಮವಾಗಿ ದೇಶದ ಹಲವು ರಾಜ್ಯಗಳಿಂದ ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಬಹುಭಾಷಿಕ ಜನರು ನೆಲೆಸಿರುವ ನಗರದಲ್ಲಿ ಭಾಷಾ ಬಳಕೆ, ಸ್ಥಳೀಯ ಸಂಸ್ಕೃತಿ ಹಾಗೂ ಪರಸ್ಪರ ಗೌರವದ ವಿಚಾರಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ.
ಸ್ಥಳೀಯ ಭಾಷೆಯಾದ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಿಗರ ಆಗ್ರಹದ ನಡುವೆಯೇ, ಭಾಷೆಯ ವಿಚಾರದಲ್ಲಿ ಯಾರ ಮೇಲೂ ಒತ್ತಡ ಹೇರಬಾರದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಇಂತಹ ಚರ್ಚೆಗಳ ನಡುವೆ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಪ್ರಸ್ತಾಪ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಕನ್ನಡಿಗರ ಅಸಮಾಧಾನ;ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಸ್ಥಳೀಯ ಸಂಸ್ಕೃತಿಗೆ ಗೌರವ ನೀಡಬೇಕು ಎಂಬುದು ಕನ್ನಡಿಗರ ಪ್ರಮುಖ ಆಗ್ರಹವಾಗಿದೆ. ಬೇರೆ ರಾಜ್ಯಗಳಿಂದ ಬಂದವರಿಗೆ ಉದ್ಯೋಗ, ವ್ಯಾಪಾರ ಮತ್ತು ಜೀವನೋಪಾಯಕ್ಕೆ ಅವಕಾಶ ನೀಡಿರುವ ನಗರದಲ್ಲಿ ಸ್ಥಳೀಯ ಭಾಷೆಯ ಸ್ಥಾನಮಾನವನ್ನು ಪ್ರಶ್ನಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಭಾಷಾ ಸಮಸ್ಯೆಗಳಿಗೆ ಸಂವಾದ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕೇ ಹೊರತು, ನಗರದ ಆಡಳಿತಾತ್ಮಕ ಸ್ಥಾನಮಾನವನ್ನೇ ಬದಲಿಸುವ ಬೇಡಿಕೆ ಮುಂದಿಡುವುದು ಸೂಕ್ತವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಒಟ್ಟಿನಲ್ಲಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂಬ ಕೆಲವರ ಸಾಮಾಜಿಕ ಜಾಲತಾಣದ ಅಭಿಪ್ರಾಯ ಇದೀಗ ಕನ್ನಡದ ಅಸ್ಮಿತೆ, ಸ್ಥಳೀಯರ ಹಕ್ಕು ಮತ್ತು ಭಾಷಾ ಸಾಮರಸ್ಯದ ಕುರಿತ ಚರ್ಚೆಗೆ ಮತ್ತೊಮ್ಮೆ ಕಿಡಿ ಹೊತ್ತಿಸಿದೆ.
