Homeರಾಜ್ಯಸಿದ್ದರಾಮಯ್ಯನವರ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ದೆಹಲಿ ವ್ಯಕ್ತಿ ವಶಕ್ಕೆ

ಸಿದ್ದರಾಮಯ್ಯನವರ ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ದೆಹಲಿ ವ್ಯಕ್ತಿ ವಶಕ್ಕೆ

ಬೆಂಗಳೂರು, ಅ.24-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್‌ ಆಪರೇಷನ್‌ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿಯ ಸೈಬರ್‌ ಕ್ರೈಂ ಠಾಣೆ ಪೊಲೀಸರು, ಕೃತ್ಯಕ್ಕೆ ಮೊಬೈಲ್‌ ಖರೀದಿಸಿ ಕೊಟ್ಟಿದ್ದ ದೆಹಲಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿ ಮೂಲದ ರಿತೇಶ್‌ ಪಾಂಡೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಸ್ಟಿಂಗ್‌ ಆಪರೇಷನ್‌ಗೆ ಬಳಕೆಯಾಗಿರುವ ಸೆಕೆಂಡ್‌ ಹ್ಯಾಂಡ್‌ ಪೋನ್‌ಅನ್ನು ಈತ ದೆಹಲಿಯಲ್ಲಿ ಖರೀದಿ ಮಾಡಿ ಆರೋಪಿಗಳಿಗೆ ಕೊಟ್ಟಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಈಗಾಗಲೇ ಖಾಸಗಿ ವಾಹಿನಿಯ ಮುಖ್ಯಸ್ಥ ರಾಕೇಶ್‌ ಶೆಟ್ಟಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದುಕೊಂಡಿದ್ದು, ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್‌‍ ನೀಡಿದ್ದಾರೆ.ಕಳೆದ ಎರಡು ವಾರಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್‌ ಕ್ರೈಂ ಪೊಲೀಸರು 15 ಜನರಿಗೂ ಹೆಚ್ಚು ಮಂದಿಯನ್ನು ಕರೆತಂದು ವಿಚಾರಣೆಯನ್ನು ಮಾಡಿ ವಿಡಿಯೋವನ್ನು ಯಾರು? ಎಲ್ಲಿಂದ ಅಪ್‌ಲೋಡ್‌ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೆಸರು ಹೇಳಿರುವ ವ್ಯಕ್ತಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ಕೊಡಲು ಸೈಬರ್‌ ಕ್ರೈಂ ಠಾಣೆ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಈ ವಿಚಾರ ನನ್ನ ಗಮನಕ್ಕೆ ಬಂದಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಒಬ್ಬ ಪತ್ರಕರ್ತ ಮತ್ತು ಮಂಗಳೂರಿನ ಕಾಂಗ್ರೆಸ್‌‍ ನಾಯಕಿಯೊಬ್ಬರು ಸೇರಿಕೊಂಡು ಈ ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಾಯಿತು ಎಂದು ಹೇಳಿದ್ದಾರೆ.ಜನರಿಗೆ ಸತ್ಯಾಂಶ ತಿಳಿಯಬೇಕು ಎಂಬ ಉದ್ದೇಶದಿಂದ ನಾನೇ ಸ್ವಯಂ ಪ್ರೇರಿತವಾಗಿ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

RELATED ARTICLES
spot_img

Latest News