Homeರಾಷ್ಟ್ರೀಯಕೇರಳದಲ್ಲಿ ನಕಲಿ ನೋಟು ಮುದ್ರಣ ಘಟಕ ಪತ್ತೆ..!

ಕೇರಳದಲ್ಲಿ ನಕಲಿ ನೋಟು ಮುದ್ರಣ ಘಟಕ ಪತ್ತೆ..!

ಕೊಲ್ಲಂ, ಅ. 24- ವ್ಯಕ್ತಿಯೊಬ್ಬರು ನಾಪತ್ತೆಯಾದ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ, ಪೊಲೀಸರಿಗೆ ಕೇರಳದ ಕೊಲ್ಲಂನಲ್ಲಿ ಅವರ ಮನೆಯಲ್ಲೇ ನಕಲಿ ನೋಟು ಮುದ್ರಣ ಘಟಕ ಪತ್ತೆಯಾಗಿದೆ. ಪೊಲೀಸರು ಮುದ್ರಣ ಯಂತ್ರಗಳು ಸೇರಿದಂತೆ ನಕಲಿ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೊಲ್ಲಂ ಸಿಟಿಯ ಜಿಲ್ಲಾ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಪಡೆ ತಂಡದೊಂದಿಗೆ ಪೊಲೀಸರು ವಾಡಿಯ ಕಲ್ಲೇಲಿವಯಲ್‌ ನಿವಾಸಿ ಸಿಬಿಯೋನ್‌‍ ಅವರ ಮನೆ ಮೇಲೆ ದಾಳಿ ನಡೆಸಿ ಆತನನ್ನು ಭಂಧಿಸಿದ್ದಾರೆ.

ಕಳೆದ ಅ.16ರಂದು ಸಿಬಿಯೋನ್‌ ಅವರ ಪತ್ನಿ ಟಿನ್ಸಿ, ಪಳ್ಳಿತೊಟ್ಟಂ ಪೊಲೀಸ್‌‍ ಠಾಣೆಯಲ್ಲಿ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ತನಿಖೆ ವೇಳೆ ಸಿಬಿಯೋನ್‌ ಅವರನ್ನು ಆಶ್ರಮಂ ಪ್ರದೇಶದಿಂದ ಅಪಹರಿಸಲಾಗಿತ್ತು ಮತ್ತು ಅವರ ಚಿನ್ನಾಭರಣಗಳನ್ನು ಕಸಿದುಕೊಳ್ಳಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು.

ಆದರ್ಶ್‌ ಎಂಬ ವ್ಯಕ್ತಿ ಸಿಬಿಯೋನ್‌ ಅವರನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದರು. ಬಳಿಕ ಸಿಬಿಯೋನ್‌ ಸ್ವತಃ ಮನೆಗೆ ಮರಳಿದ್ದು, ನಡೆದ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಸಿಬಿಯೋನ್‌ ಅವರ ಹಣಕಾಸಿನ ವ್ಯವಹಾರಗಳ ಕುರಿತು ನಡೆಸಿದ ವಿಚಾರಣೆಯಲ್ಲಿ ಹವಾಲಾ ವಹಿವಾಟು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳ ಸುಳಿವು ದೊರೆತ ಹಿನ್ನೆಲೆಯಲ್ಲಿ, ಕಳೆದ ರಾತ್ರಿ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದರು.

ಮನೆಯಲ್ಲಿ ನಡೆಸಿದ ಶೋಧದ ವೇಳೆ ಡಿಜಿಟಲ್‌ ಪ್ರಿಂಟರ್‌ ,500 ಮುಖಬೆಲೆಯ ನೋಟುಗಳ ಗಾತ್ರಕ್ಕೆ ಕತ್ತರಿಸಲಾದ ಕಾಗದದ ಕಟ್ಟುಗಳು, ಕರೆನ್ಸಿಎಣಿಸುವ ಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೂಲಕ ಸುಮಾರು 2.5 ಕೋಟಿ ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಇದಲ್ಲದೆ, ಮನೆಯಿಂದ 43 ಸವರನ್‌ ಚಿನ್ನಾಭರಣ ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಅಟ್ಟಿಂಗಲ್‌ ನಿವಾಸಿ ರವಿ ಎಂಬಾತ 30 ಲಕ್ಷ ಪಡೆದು ನಕಲಿ ನೋಟು ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ಸಿಬಿಯೋನ್‌ಗೆ ಪೂರೈಸಿದ್ದ ಎಂಬ ಮಾಹಿತಿ ದೊರೆತಿದೆ ಎಂದು ಪೊಲೀಸ್‌‍ ಅಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News