ಬೆಂಗಳೂರು, ಅ.25- ಬರ ಬಾಧಿತ ಪ್ರದೇಶಗಳಲ್ಲಿನ ರೈತರಿಗೆ ನೀಡುವ 2,500 ರೂ.ಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆೆ ಆಗ್ರಹಿಸುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಅಧಿಸೂಚನೆ ಜಾರಿಯಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡಿದೆ. ಹಣವನ್ನು ಆರ್ಥಿಕ ಇಲಾಖೆ ಶೀಘ್ರ ಬಿಡುಗಡೆ ಮಾಡಬೇಕೆಂದು ಕಂದಾಯ ಸಚಿವನಾಗಿ ನಾನು ಆಗ್ರಹಿಸುತ್ತೇನೆ. ಖಜಾನೆಯಿಂದ ಹಣ ಬಿಡುಗಡೆಯಾದರೆ ಅದನ್ನು ಜಿಲ್ಲಾಧಿಕಾರಿಗಳು ರೈತರಿಗೆ ತಲುಪಿಸುತ್ತಾರೆ ಎಂದು ಹೇಳಿದರು.
ಆರ್ಎಸ್ಎಸ್ನ ಪಥಸಂಚಲನಕ್ಕೆ ತಮಿಂದ ಯಾವುದೇ ಅಡ್ಡಿಯಾಗಿಲ್ಲ. ತುಮಕೂರು ಜಿಲ್ಲೆಯಲ್ಲಿ ಅನುಮತಿ ನೀಡುವಂತೆ ಉಸ್ತುವಾರಿ ಸಚಿವನಾಗಿ ಸೂಚನೆ ನೀಡಿದ್ದೆ. ಆದರೆ ಚುನಾವಣಾ ಆಯೋಗ ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಚುನಾವಣೆಗಳ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಮತಿ ನೀಡಬಾರದು ಎಂದು ನಿರ್ದೇಶನ ನೀಡಿದೆ. ಆಯೋಗದ ಸೂಚನಾ ಹೊರತಾಗಿಯೂ ಅನುಮತಿ ನೀಡಿದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ವಿರುದ್ಧ ಆಯೋಗ ಕ್ರಮ ಜರುಗಿಸಲಿದೆ. ಹೀಗಾಗಿ ಅನುಮತಿ ನಿರಾಕರಿಸಿರಬಹುದು ಎಂದರು.
ಹಿಂದೆ ನಾನು ಗೃಹ ಸಚಿವನಾಗಿದ್ದಾಗ ಯಾವುದೇ ಸಮಸ್ಯೆಗಳಿರಲಿಲ್ಲ. ಪಥಸಂಚಲನಕ್ಕೆ ಅನುಮತಿ ನೀಡಲಾಗಿತ್ತು. ಈಗಲೂ ಕೂಡ ಯಾವುದೇ ತೊಂದರೆ ಇಲ್ಲದೆ ಅನುಮತಿ ನೀಡುವಂತೆ ನಾನು ಆದೇಶಿಸಿದ್ದೆ. ಆದರೆ ಆಯೋಗ ನೀತಿ ಸಂಹಿತೆ ಕಾರಣಕ್ಕೆ ಅಡ್ಡಿ ಪಡಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಸ್ತುತ ತೀವ್ರ ಬರ ಪರಿಸ್ಥಿತಿಯನ್ನು ರಾಜ್ಯ ಅನುಭವಿಸುತ್ತಿದೆ. ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಈಗಿರುವ ದಾಸ್ತಾನು ಮೂಲಕ ಸದ್ಯದ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರದ ಕೊರತೆ ತೀವ್ರವಾಗಿ ಪರದಾಡುವ ಪರಿಸ್ಥಿತಿ ಬರಬಹುದು. ನಾವು ಆ ಬಗ್ಗೆ ಚರ್ಚೆ ಮಾಡಬೇಕು.
ಕೇಂದ್ರದಲ್ಲಿ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಇತರರು ರಾಜ್ಯದ ನೆರವಿಗೆ ಧಾವಿಸಬೇಕು. ಅದನ್ನು ಬಿಟ್ಟು ದಿನ ಬೆಳಗಾದರೆ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಮಾಡುತ್ತಿರುವುದು ಅಪ್ರಸ್ತುತ. ಇದರಿಂದ ಜನ ಬೇಸರಗೊಂಡಿದ್ದಾರೆ ಎಂದರು.
ಚರ್ಚೆ ಮಾಡಲು ಹಲವಾರು ಸಮಸ್ಯೆಗಳಿವೆ. ಒಂದು ವೇಳೆ ಸ್ಟಿಂಗ್ ಆಪರೇಷನ್ ನಡೆದಿದೆ ಎಂದಾದರೆ, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ಪ್ರಮುಖ ಹುದ್ದೆಯಲ್ಲಿರುವವರು ಜನರ ಸಮಸ್ಯೆ ಬಗ್ಗೆ ಗಮನ ಹರಿಸಿ ಸಮಗ್ರ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇದೆ ಎಂದರು.
ಎಲ್ಲಾ ವಿಚಾರಗಳು ಹೈಕಮಾಂಡ್ ಗಮನಕ್ಕೆ ಹೋಗಬೇಕೆಂದೇನು ಇಲ್ಲ. ಮುಖ್ಯಮಂತ್ರಿಯವರೇ ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಗತ್ಯವಾದರೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ನಾಯಕರ ಜೊತೆ ಸಮಾಲೋಚನೆ ಮಾಡಬಹದು ಎಂದರು.
ಬೆಳೆ ವಿಮೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತಮ ಪಾಲಿನ 1,680 ಕೋಟಿ ರೂ.ಗಳನ್ನು ಪಾವತಿ ಮಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್ ರಾಜ್ಯ ಸರ್ಕಾರ ಕೇಂದ್ರ ಹಣ ನೀಡದೇ ಇದ್ದರೂ ರೈತರಿಗೆ 2,500 ರೂ.ಗಳನ್ನು ಪ್ರತಿ ಎಕರೆಗೆ ನೀಡುತ್ತಿಲ್ಲವೇ? ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಾ ಕುಳಿತರೆ ಅಂತಿಮವಾಗಿ ತೊಂದರೆಯಾಗುವುದು ರಾಜ್ಯದ ರೈತರಿಗೆ ಎಂದು ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಯವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬಾರದು, ಎಲ್ಲರ ಜೊತೆ ಚರ್ಚಿಸಬೇಕು ಎಂಬ ಕಾರಣಕ್ಕಾಗಿ ರಾಜಕೀಯ ವ್ಯವಹಾರಗಳ ಸಮಿತಿ ರಚಿಸಲಾಗಿದೆ. ತಾವು ಅದರ ಅಧ್ಯಕ್ಷತೆ ವಹಿಸಿ ಈಗಾಗಲೇ ಒಂದು ಸಭೆಯನ್ನು ಮಾಡಿದ್ದೇನೆ. ಈ ಸಮಿತಿ ಸರ್ಕಾರದ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಚರ್ಚಿಸಿ ಅಭಿಪ್ರಾಯ ತಿಳಿಸಲಿದೆ. ನಂತರ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
