ಬೆಂಗಳೂರು,ಅ.25-ನಗರದ ಜರ್ಮಿಯಾ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣವನ್ನು ಬೇಧಿಸಿರುವ ಪುಲಕೇಶಿನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಹಳೆಯ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯವೆಸಗ ಲಾಗಿದೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
ಸ್ಫೋಟಗೊಂಡ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆ ಮರೆಸಿಕೊಂಡಿದ್ದ ಈ ಮೂವರು ಆರೋಪಿಗಳನ್ನು ಪೂರ್ವ ವಿಭಾಗದ ಪೊಲೀಸರ ತಂಡಗಳು ಪತ್ತೆಹಚ್ಚಿ ಬಂಧಿಸಿ, ನಗರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿವೆ.ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ತಲೆ ಮರೆಸಿಕೊಂಡಿದ್ದ ಜಲಾಲ್ ಎಂಬ ಯುವಕನನ್ನು ತಾಂತ್ರಿಕ ವಿಧಾನಗಳನ್ನು ಆಧರಿಸಿ ವಿಶೇಷ ತಂಡವೊಂದು ವಶಕ್ಕೆ ಪಡೆದು, ಈ ಪ್ರಕರಣದಲ್ಲಿ ಈತನ ಪಾತ್ರವೇನಿದೆ ಎಂಬುವುದನ್ನು ತನಿಖೆ ಕೈಗೊಂಡಿದೆ.
ಅ.20 ರಂದು ಮಧ್ಯಾಹ್ನ ಜರ್ಮಿಯಾ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಸೆಕ್ಯೂರಿಟಿಗಾರ್ಡ್ ಅಲ್ಲಾಹುದ್ದಿನ್,ಪೇಟಂರ್ ಸೂರಜ್ ಎಂಬುವವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಫೋಟದ ಸುದ್ದಿ ತಿಳಿದ ತಕ್ಷಣ ಪುಲಕೇಶಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಅರಿತ ಪೂರ್ವ ವಿಭಾಗದ ಡಿಸಿಪಿ ವಿಕ್ರಂಅಮಟೆ ಅವರು ಆರೋಪಿಗಳನ್ನು ಬಂಧಿಸಲು ಐದು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡಗಳು ತನಿಖೆ ಕೈಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿವೆ.ರಾಷ್ಟ್ರೀಯ ತನಿಖಾದಳ(ಎನ್‌ಐಎ) ಅಧಿಕಾರಿಗಳೂ ಸಹ ಈ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
