ಬೆಂಗಳೂರು, ಅ.25- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಒಂದು ಕುಟುಂಬವನ್ನು ಮುಗಿಸಲು ಆರು ನೂರು ಕೋಟಿ ರೂ. ಡೀಲ್ ಕೊಟ್ಟಿರುವ ವಿಚಾರದ ಆಡಿಯೋ ಸುದ್ದಿ ವೈರಲ್ ಆಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ಸಂಶಯವೇ ಇಲ್ಲ. ಅದು ಬೇರೆ ಯಾರೂ ಅಲ್ಲ, ಈಗಿನ ಮಹಾನ್ ಮುಖ್ಯಮಂತ್ರಿಗಳೇ ಒಂದು ಕುಟುಂಬವನ್ನು ಮುಗಿಸಲು ಹೇಳಿರುವುದು. ಆ ಕುಟುಂಬ ದೇವೇಗೌಡರ ಕುಟುಂಬ.
ಅದಕ್ಕಾಗಿಯೇ ಇದೆಲ್ಲಾ ತನಿಖೆ ಆಗಬೇಕು. ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ ಎಂದು ಸ್ಟಿಂಗ್ ಆಪರೇಷನ್ ವಿಚಾರದ ಬಗ್ಗೆ ವಾಗ್ದಾಳಿ ನಡೆಸಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿಲ್ಲ. ಕಾಂಗ್ರೆಸ್ನವರೇ ಸೇರಿಕೊಂಡು ಇದೆಲ್ಲಾ ಮಾಡಿದ್ದಾರಲ್ಲ. ಅದರ ಬಗ್ಗೆ ತನಿಖೆಯಾಗಲಿ ಎಂದು ಸ್ಟಿಂಗ್ ಆಪರೇಷನ್ ಬಗ್ಗೆ ಅವರು ತಿಳಿಸಿದರು. ನಮ ಪಕ್ಷದ ಕಾರ್ಯಕರ್ತರು ಕೈಗೆ ಸಿಗದಂತೆ ತಪ್ಪಿಸಿ ಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಯಾರೂ ತಪ್ಪಿಸಿಕೊಳ್ಳುವ ಪ್ರಶ್ನೆ ಇಲ್ಲ, ಬಂದು ನಿಮನ್ನು ಭೇಟಿ ಮಾಡುತ್ತಾರೆ. ಸ್ಟಿಂಗ್ ಆಪರೇಷನ್ ತನಿಖೆಯನ್ನು ಹಳ್ಳ ಹಿಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಮ ವಾರ್ ರೂಂನಲ್ಲಿ ಕೆಲಸ ಮಾಡುವ ಹುಡುಗರಿಗೆ ಹೆದರಬೇಡಿ ಎಂದು ಭರವಸೆ ನೀಡಿರುವುದಾಗಿ ಅವರು ಹೇಳಿದರು.
ಓಟ್ ಇಂಡಿಯಾ ಸರ್ವೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈಗ ಚುನಾವಣೆ ನಡೆದರೂ ಅಷ್ಟೇ; ಒಂದು ವರ್ಷ ಬಿಟ್ಟು ಚುನಾವಣೆ ನಡೆದರೂ ಅಷ್ಟೆ. ಎನ್ಡಿಎ ಮೈತ್ರಿ ಕೂಟ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಬೇರೆ ವಿಚಾರಗಳಿಗೆ ಖರ್ಚು ಮಾಡಲು ಹಣವಿದೆ. ರೈತರಿಗೆ ಕೊಡಲು ಹಣ ಇಲ್ಲ. ದೊಡ್ಡ ದೊಡ್ಡ ಫೋಟೋ ಹಾಕಿಸಿಕೊಳ್ಳಲು ಹಣ ಇದೆ. ರೈತರಿಗೆ ಬಿಡುಗಡೆ ಮಾಡಲು ಮಾತ್ರ ಹಣ ಇಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
