ಬೆಂಗಳೂರು, ಅ.26- ನಾಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಳೆ ಅಂತಿಮ ಪಟ್ಟಿ ಬಿಡುಗಡೆ ಅಗಲಿದೆ. ಇದರೊಂದಿಗೆ ರಾಜಧಾನಿ ಬೆಂಗಳೂರಿನ ಮತದಾರರ ನಿಖರ ಸಂಖ್ಯೆಯ ಕುರಿತು ಕುತೂಹಲ ಹೆಚ್ಚಾಗಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅಂತಿಮ ಹಂತ ತಲುಪಿದ್ದು, ಹೊಸ ಮತದಾರರ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ, ಎಸ್ಐಆರ್ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಮಾಹಿತಿ ಹಂಚಿಕೊಂಡಿದೆ.
ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಸಿದ್ಧತೆಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.
ಹಳೆಯ ಪಟ್ಟಿಗೂ ಹೊಸ ಪಟ್ಟಿಗೂ ಭಾರಿ ವ್ಯತ್ಯಾಸ?:
ಎಸ್ಐಆರ್ ಪ್ರಕ್ರಿಯೆಗೂ ಮುನ್ನ ಬೆಂಗಳೂರಿನಲ್ಲಿ ಸುಮಾರು 1.04 ಕೋಟಿ ಮತದಾರರಿದ್ದರು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕರಣೆ ಬಳಿಕ ಸಿದ್ಧಪಡಿಸಲಾದ ಹೊಸ ಪಟ್ಟಿಯಲ್ಲಿ ಸುಮಾರು 60 ಲಕ್ಷ ಮತದಾರರ ಹೆಸರುಗಳು ಮಾತ್ರ ಉಳಿದಿವೆ ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಲಾಗಿದೆ.
ಹಳೆಯ ಮತದಾರರ ಪಟ್ಟಿಗೆ ಹೋಲಿಸಿದರೆ ಹೊಸ ಪಟ್ಟಿಯಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮತದಾರರ ವಿವರಗಳ ಪರಿಶೀಲನೆ, ಸ್ಥಳಾಂತರ, ಮೃತಪಟ್ಟವರ ಹೆಸರುಗಳ ತೆರವು ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಸಂಭವಿಸಿರಬಹುದಾದರೂ, ಮತದಾರರ ಸಂಖ್ಯೆಯಲ್ಲಿನ ಇಳಿಕೆಗೆ ನಿಖರ ಕಾರಣಗಳು ಮತ್ತು ಅಧಿಕೃತ ಅಂಕಿಅಂಶಗಳು ಅಂತಿಮ ಪಟ್ಟಿ ಪ್ರಕಟವಾದ ಬಳಿಕವೇ ಸ್ಪಷ್ಟವಾಗಬೇಕಿದೆ.
ರಾಜಕೀಯ ಪಕ್ಷಗಳ ಚಿತ್ತ ಅಂತಿಮ ಪಟ್ಟಿಯತ್ತ:ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಚುನಾವಣೆ ನಡೆಯಬೇಕಿರುವುದರಿಂದ ಅಂತಿಮ ಮತದಾರರ ಪಟ್ಟಿ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ವಾರ್ಡ್ವಾರು ಮತದಾರರ ಸಂಖ್ಯೆಯಲ್ಲಿನ ಬದಲಾವಣೆ, ಹೆಸರುಗಳ ಸೇರ್ಪಡೆ ಮತ್ತು ಕೈಬಿಟ್ಟಿರುವ ಮತದಾರರ ವಿವರಗಳು ಚುನಾವಣಾ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ವಿವಿಧ ಪಕ್ಷಗಳ ಮುಖಂಡರು ಹೊಸ ಪಟ್ಟಿಯತ್ತ ಗಮನಹರಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಮತದಾರರ ಒಟ್ಟು ಸಂಖ್ಯೆ, ವಾರ್ಡ್ವಾರು ವಿವರಗಳು ಹಾಗೂ ಪರಿಷ್ಕರಣೆ ಸಂದರ್ಭದಲ್ಲಿ ಕೈಬಿಟ್ಟ ಮತ್ತು ಸೇರ್ಪಡೆಗೊಂಡ ಹೆಸರುಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಮಾಹಿತಿಯು ಮುಂಬರುವ ಜಿಬಿಎ ಚುನಾವಣೆಯ ಸಿದ್ಧತೆಗಳಿಗೆ ನಿರ್ಣಾಯಕವಾಗಲಿದೆ.
