Homeರಾಜ್ಯಕಬ್ಬು ಬೆಳೆಗಾರರ ಸಮಸ್ಯೆ : ಕೇಂದ್ರದ ಮೇಲೆ ಹೊಣೆಗಾರಿಕೆ ಹೆಚ್ಚು ಎಂದ ಸಿಎಂ ಡಿಕೆಶಿ

ಕಬ್ಬು ಬೆಳೆಗಾರರ ಸಮಸ್ಯೆ : ಕೇಂದ್ರದ ಮೇಲೆ ಹೊಣೆಗಾರಿಕೆ ಹೆಚ್ಚು ಎಂದ ಸಿಎಂ ಡಿಕೆಶಿ

ಬೆಂಗಳೂರು, ಅ.26- ಕಬ್ಬು ಬೆಳೆಗಾರರ ಬೇಡಿಕೆಗಳ ವಿಚಾರವಾಗಿ ರಾಜ್ಯಕ್ಕಿಂತಲೂ, ಕೇಂದ್ರ ಸರ್ಕಾರದ ಮೇಲಿನ ಹೊಣೆಗಾರಿಕೆ ಹೆಚ್ಚಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ವೇಳೆ ಕಿತ್ತೂರಿನಲ್ಲಿ ಅವರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಆಲಿಸಿದ್ದೇನೆ. ಇಂದು ಬೆಳಗಾವಿಯಲ್ಲಿ ಮೊದಲು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಚರ್ಚೆ ನಡೆಸಲಾಗುವುದು. ನಂತರ ರೈತರ, ಬಳಿಕ ಜನ ಪ್ರತಿನಿಧಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಇಂದು ಬೆಳಗ್ಗೆ ಹಲವಾರು ಶಾಸಕರು ತಮ ಬಳಿಗೆ ಬಂದು ಅವರ ಮೇಲಿರುವ ಒತ್ತಡಗಳನ್ನು ಹೇಳಿಕೊಂಡಿದ್ದಾರೆ. ಅವರಿಗೆ ಸಭೆಯಲ್ಲೇ ಮಾತನಾಡುವಂತೆ ನಾನು ಮಾರ್ಗದರ್ಶನ ನೀಡಿದ್ದೇನೆ ಎಂದರು.ಶಾಸಕರು, ರೈತರ ಮತದಾರರ ಪ್ರತಿನಿಧಿಗಳು ಸರ್ಕಾರದ ಧ್ವನಿ. ಮೈಸೂರು, ಮಧ್ಯ ಕರ್ನಾಟಕ, ಬೆಳಗಾವಿ, ರಾಯಚೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಕಡೆಗಳಲ್ಲಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು.

ರೈತರ ರಕ್ಷಣೆ ನಮ ಕರ್ತವ್ಯ. ಅದೇ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಬೇಡಿಕೆಗಳನ್ನು ಆಲಿಸಬೇಕಿದೆ. ಎಲ್ಲಾ ರೀತಿಯ ಚರ್ಚೆಗಳಾದ ನಂತರ ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಲಾಗುವುದು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ರಾಜ್ಯದ ಪಾಲು ಶೇ.10ರಷ್ಟು ಇದ್ದರೆ, ಕೇಂದ್ರದ ಪಾಲು ಶೇ. 90 ರಷ್ಟು ಎಂದು ಹೇಳಿದರು.

ಈ ಹಿಂದೆ ಸಕ್ಕರೆ ಕಾರ್ಖಾನೆಯವರು ಒಪ್ಪದೇ ಇದ್ದರೂ, ಪ್ರತಿ ಟನ್‌ಗೆ 250 ರೂ.ಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರವೂ ಕೂಡ 50 ರೂ.ಗಳು ನೀಡಿತ್ತು. ಬಹಳಷ್ಟು ಕಾರ್ಖಾನೆಗಳು ಸರ್ಕಾರದ ಸೂಚನೆಯಂತೆ 250 ರೂ.ಗಳನ್ನು ನೀಡಿಲ್ಲ. ಅದು ಕೂಡ ತಮ ಗಮನಕ್ಕಿದೆ. ಇಂದಿನ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರ, ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್‌ ಅನ್ನು ಸಂಪೂರ್ಣವಾಗಿ ಖರೀದಿಸಬೇಕು ಎಂಬ ಬೇಡಿಕೆಯ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಸ್ಟಿಂಗ್‌ ಆಪರೇಷನ್‌ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಡಿ.ಕೆ.ಶಿವಕುಮಾರ್‌ ನಿರ್ಗಮಿಸಿದರು.

RELATED ARTICLES

Latest News