Homeರಾಜ್ಯಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಎನ್‌ಜಿಟಿ ತಡೆ

ಬೆಂಗಳೂರಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಎನ್‌ಜಿಟಿ ತಡೆ

ಬೆಂಗಳೂರು, ಅ.26- ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ನಿರ್ಮಿಸಲು ಉದ್ದೇಶಿಸಲಾಗಿದ್ದ ಕಿರು ಸುರಂಗ ಮಾರ್ಗ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.ಈ ಕಾಮಗಾರಿಗೆ ಸಂಬಂಧಿಸಿದಂತೆ ಮರಗಳ ತೆರವು ಕಾರ್ಯಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್‌ಜಿಟಿ) ದಕ್ಷಿಣ ವಲಯ ಪೀಠ ತಡೆ ನೀಡಿದೆ.

ಯೋಜನೆಗೆ ಸಂಬಂಧಿಸಿದ ಅರ್ಜಿ ಇತ್ಯರ್ಥವಾಗುವವರೆಗೆ ಯಾವುದೇ ಮರಗಳನ್ನು ತೆರವುಗೊಳಿಸದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ ಸೂಚಿಸಿದೆ. ಇದರಿಂದ ಸುರಂಗ ಮಾರ್ಗ ಯೋಜನೆಗೆ ಪರಿಸರ ಸಂಬಂಧಿತ ಕಾನೂನು ಅಡ್ಡಿ ಎದುರಾದಂತಾಗಿದೆ.

ಚೆನ್ನೈನಲ್ಲಿರುವ ಎನ್‌ಜಿಟಿಯ ದಕ್ಷಿಣ ವಲಯ ಪೀಠವು ಅಕ್ಟೋಬರ್‌ 16ರಂದು ಮಂಗಳೂರಿನ ಪರಿಸರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಮಧ್ಯಂತರ ಆದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್‌ 15ರಂದು ನಡೆಯಲಿದೆ.

ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುಮಾರು 2.3 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ಬಿಡಿಎ ಉದ್ದೇಶಿಸಿದ್ದು, ಇದಕ್ಕಾಗಿ 70ಕ್ಕೂ ಹೆಚ್ಚು ಪ್ರಭೇದಗಳಿಗೆ ಸೇರಿದ ಒಟ್ಟು 1,128 ಮರಗಳನ್ನು ತೆರವುಗೊಳಿಸುವ ಪ್ರಸ್ತಾವವಿದೆ. ಆದರೆ, ಇಷ್ಟೊಂದು ಸಂಖ್ಯೆಯ ಮರಗಳನ್ನು ಕಡಿಯುವುದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಹೆಬ್ಬಾಳ ಕೆರೆ, ಅದರ ಸುತ್ತಮುತ್ತಲಿನ ಜೌಗು ಪ್ರದೇಶಗಳು, ಅಂತರ್ಜಲ ಮಟ್ಟ ಹಾಗೂ ನೈಸರ್ಗಿಕ ನೀರು ಹರಿಯುವ ವ್ಯವಸ್ಥೆಗೆ ಯೋಜನೆಯಿಂದ ಹಾನಿಯಾಗುವ ಸಾಧ್ಯತೆಯಿದೆ ಎಂದು ಅರ್ಜಿದಾರರು ನ್ಯಾಯಾಧಿಕರಣದ ಗಮನಕ್ಕೆ ತಂದಿದ್ದಾರೆ. ಪರಿಸರದ ಮೇಲಿನ ಪರಿಣಾಮಗಳನ್ನು ಸಮರ್ಪಕವಾಗಿ ಪರಿಶೀಲಿಸದೆ ಮರಗಳ ತೆರವಿಗೆ ಅವಕಾಶ ನೀಡಬಾರದು ಎಂಬುದು ಅರ್ಜಿದಾರರ ವಾದವಾಗಿದೆ.

1,600 ಆಕ್ಷೇಪಣೆ ಸಲ್ಲಿಕೆ; ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುವ ಬಿಡಿಎ ಪ್ರಸ್ತಾವಕ್ಕೆ ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈವರೆಗೆ ಸುಮಾರು 1,600 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿದುಬಂದಿದೆ.

ಮರಗಳ ತೆರವು ವಿಚಾರವನ್ನು ಪರಿಶೀಲಿಸಲು ರಚಿಸಲಾಗಿರುವ ಮರ ತಜ್ಞರ ಸಮಿತಿಯು ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಲಿದೆ. ಜತೆಗೆ, ಯೋಜನಾ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿ ಎಷ್ಟು ಮರಗಳನ್ನು ಉಳಿಸಬಹುದು, ಎಷ್ಟು ಮರಗಳನ್ನು ಸ್ಥಳಾಂತರಿಸಬಹುದು ಹಾಗೂ ಅನಿವಾರ್ಯವಾಗಿ ಎಷ್ಟು ಮರಗಳನ್ನು ಕಡಿಯಬೇಕಾಗಬಹುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಒಂದೆಡೆ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದರೆ, ಮತ್ತೊಂದೆಡೆ ಮರಗಳ ಸಂರಕ್ಷಣೆ ಮತ್ತು ಜಲಮೂಲಗಳ ರಕ್ಷಣೆಯ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ. ಎನ್‌ಜಿಟಿಯ ಮಧ್ಯಂತರ ಆದೇಶದಿಂದ ಸದ್ಯಕ್ಕೆ ಮರ ತೆರವು ಕಾರ್ಯಕ್ಕೆ ತಡೆ ಬಿದ್ದಿದ್ದು, ಮುಂದಿನ ವಿಚಾರಣೆಯಲ್ಲಿ ನ್ಯಾಯಾಧಿಕರಣ ಕೈಗೊಳ್ಳುವ ನಿರ್ಧಾರ ಮಹತ್ವ ಪಡೆದುಕೊಂಡಿದೆ.

RELATED ARTICLES

Latest News