ಲಂಡನ್, ಅ.27- ಕಳೆದ ಎರಡು ವರ್ಷಗಳಲ್ಲಿ ಭಾರತ ಸಾಕಷ್ಟು ಬದಲಾವಣೆ ಕಂಡಿದೆ. ಈ ಯಶಸ್ಸಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೊಡುಗೆ ಕಾರಣ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೆಯೊಂದರ ಲೇಖನದಲ್ಲಿ ಅವರು 2003ರಿಂದ ಭಾರತದೊಂದಿಗಿನ ತಮ್ಮ ಒಡನಾಟವನ್ನು ಸರಿಸಿಕೊಂಡಿದ್ದಾರೆ. ಕ್ರೀಡೆ, ಮೂಲಸೌಕರ್ಯ, ತಂತ್ರಜ್ಞಾನ ಮತ್ತು ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶದಲ್ಲಿ ಆಗಿರುವ ಬದಲಾವಣೆಗಳಿಗೆ ಪ್ರಧಾನಿ ಮೋದಿ ಅವರ ನಾಯಕತ್ವವೂ ಕೊಡುಗೆ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾನು ಮೊದಲ ಬಾರಿಗೆ 2003ರಲ್ಲಿ ಭಾರತಕ್ಕೆ ಬಂದಿದ್ದೆ. ಆಗ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಆದರೆ ಅವರು ಆಗಲೇ ಗುಜರಾತ್ನ ಮುಖ್ಯಮಂತ್ರಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದರು. ಇದೀಗ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ್ದಾರೆ ಎಂಬ ವಿಚಾರ ಕೇಳಿದಾಗ ನನಗೆ ಅಚ್ಚರಿಯಾಯಿತು.
ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಷ್ಟು ದೀರ್ಘಕಾಲ ಅಧಿಕಾರದಲ್ಲಿರುವುದು ದೊಡ್ಡ ಸಾಧನೆಯೇ ಸರಿ ಎಂದಿದ್ದಾರೆ.ಇನ್ನು ಮೋದಿ ಅವರ ರಾಜಕೀಯ ಪಯಣವನ್ನು ಕ್ರಿಕೆಟ್ನ ಸುದೀರ್ಘ ಇನ್ನಿಂಗ್್ಸಗೆ ಹೋಲಿಸಿರುವ ಅವರು, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಬ್ರಿಟನ್ನಲ್ಲಿ ಆರು ಮಂದಿ ಪ್ರಧಾನಮಂತ್ರಿಗಳು ಬದಲಾಗಿದ್ದಾರೆ. ಭಾರತಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಕಾರಣ, ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹತ್ತಿರದಿಂದ ಗಮನಿಸಲು ಸಾಧ್ಯವಾಗಿದೆ. ಭಾರತೀಯರಲ್ಲಿ, ವಿಶೇಷವಾಗಿ ಯುವಜನರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಬಲ್ಲೆವು ಎಂಬ ನಂಬಿಕೆ ಯುವಕರಲ್ಲಿ ಬೆಳೆದಿದೆ. ತಾವು ಗಮನಿಸಿರುವ ಈ ಬದಲಾವಣೆಗೆ ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ದೊಡ್ಡ ಗುರಿಗಳನ್ನು ಸಾಧಿಸುವ ಮನೋಭಾವವೂ ಕಾರಣವಾಗಿದೆ ಎಂದು ಪೀಟರ್ಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದೆ ಭಾರತೀಯ ಕ್ರಿಕೆಟ್ ತಂಡದ ಯಶಸ್ಸು ಕೆಲವೇ ಕೆಲವು ಆಟಗಾರರನ್ನು ಹೆಚ್ಚು ಅವಲಂಬಿಸಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ತಂಡದಲ್ಲಿ ಪ್ರತಿಭಾವಂತ ಆಟಗಾರರ ಸಂಖ್ಯೆ ಹೆಚ್ಚಾಗಿದೆ. ಯುವ ಆಟಗಾರರು ಹೆಚ್ಚಿನ ಆತ್ಮವಿಶ್ವಾಸ ಮತ್ತು ಉತ್ತಮ ಸಿದ್ಧತೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುತ್ತಿದ್ದಾರೆ. ಇತ್ತ ಮಹಿಳಾ ಕ್ರಿಕೆಟ್ನಲ್ಲಿ ಭಾರತ ಸಾಧಿಸುತ್ತಿರುವ ಯಶಸ್ಸು ಜಾಗತಿಕ ಮಟ್ಟದಲ್ಲಿ ಈ ಕ್ರೀಡೆಯ ಬೆಳವಣಿಗೆಗೆ ನೆರವಾಗುತ್ತಿದೆ ಎಂದಿದ್ದಾರೆ.
ಅಥ್ಲೆಟಿಕ್ಸ್, ಶೂಟಿಂಗ್, ಕುಸ್ತಿ, ಬಾಕ್ಸಿಂಗ್, ಬ್ಯಾಡ್ಮಿಂಟನ್ ಮತ್ತು ಹಾಕಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತದ ಸಾಧನೆಯನ್ನು ಶ್ಲಾಘಿಸಿರುವ ಪೀಟರ್ಸನ್, ಉತ್ತಮ ಕ್ರೀಡಾ ಸೌಲಭ್ಯಗಳು, ಫಿಟ್ನೆಸ್ಗೆ ಹೆಚ್ಚುತ್ತಿರುವ ಆದ್ಯತೆ ಮತ್ತು ವೃತ್ತಿಪರ ತರಬೇತಿಯು ಭಾರತೀಯ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗಿವೆ. ಪ್ರಧಾನಿ ಮೋದಿ ಅವರ ಕ್ರೀಡೆಯ ಮೇಲಿನ ಆಸಕ್ತಿ ಮತ್ತು ಫಿಟ್ ಇಂಡಿಯಾ ಅಭಿಯಾನದಿಂದ ಜನರಲ್ಲಿ ದೈಹಿಕ ಆರೋಗ್ಯ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ನೆರವಾಗಿದೆ ಎಂದಿದ್ದಾರೆ.
ಮೂಲಸೌಕರ್ಯ, ತಂತ್ರಜ್ಞಾನ ಪ್ರಗತಿಗೆ ಮೆಚ್ಚುಗೆಭಾರತದಲ್ಲಿ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆಯೂ ಪೀಟರ್ಸನ್ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ವಿಮಾನ ನಿಲ್ದಾಣಗಳು, ರಸ್ತೆಗಳು, ಮೆಟ್ರೋ ವ್ಯವಸ್ಥೆಗಳು ಮತ್ತು ಹೋಟೆಲ್ಗಳ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಹಿಂದೆ ಭಾರತದ ಬಗ್ಗೆ ಚರ್ಚಿಸುವಾಗ ಇಲ್ಲಿನ ಆಹಾರ, ಜನಸಂದಣಿ ಮತ್ತು ಹವಾಮಾನದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಆದರೆ ಈಗ ಭಾರತದ ಕೋವಿಡ್-19 ಲಸಿಕೆಗಳ ರಫ್ತು, ಸ್ಟಾರ್ಟ್ಅಪ್ಗಳು, ಚಂದ್ರಯಾನ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಈ ಹಿಂದೆಯೂ ಹಲವು ಬಾರಿ ಮಾತನಾಡಿರುವ ಕೆವಿನ್ ಪೀಟರ್ಸನ್, ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಮಯ ಕಳೆದಿದ್ದನ್ನು ನೆನಪಿಸಿಕೊಂಡಿದ್ದಾರೆ. ಖಡ್ಗಮೃಗಗಳ ಸಂರಕ್ಷಣೆಗಾಗಿ ನಡೆಯುತ್ತಿರುವ ಕೆಲಸಗಳನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಯೋಜನೆ ಮತ್ತು ಗುಜರಾತ್ನ ಏಷ್ಯನ್ ಸಿಂಹಗಳ ಸಂರಕ್ಷಣಾ ಪ್ರಯತ್ನಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರನ್ನು ವೈಯಕ್ತಿಕವಾಗಿ ಭೇಟಿಯಾದ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣೆ, ವಿಶೇಷವಾಗಿ ಚೀತಾಗಳನ್ನು ಭಾರತಕ್ಕೆ ಮರಳಿ ತರುವ ಯೋಜನೆಯ ಕುರಿತು ಚರ್ಚಿಸಿದ್ದನ್ನೂ ಪೀಟರ್ಸನ್ ನೆನಪಿಸಿಕೊಂಡಿದ್ದಾರೆ.
