ಹೈದರಾಬಾದ್, ಅ. 27- ಪತ್ನಿಯ ಮೇಲೆ ತನ್ನ ಮೂವರು ಸ್ನೇಹಿತರಿಂದ ಅತ್ಯಾಚಾರ ಎಸಗಿಸಿರುವ ಅಮಾನವೀಯ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.ಮ್ಯಾನ್ಮಾರ್‌ನ 18 ವರ್ಷದ ಮಹಿಳೆಯೊಬ್ಬರು, ಹೈದರಾಬಾದ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ಪತಿ ಪದೇಪದೇ ಮೂವರು ಸ್ನೇಹಿತರನ್ನು ಕಳುಹಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.ಬಾಕಿ ಉಳಿದಿದ್ದ ಮನೆ ಬಾಡಿಗೆಯನ್ನು ವಸೂಲಿ ಮಾಡಲು ಮನೆ ಮಾಲೀಕರು ಬಂದಾಗ, ಮನೆಯ ಬೀಗವನ್ನು ಒಡೆದು ತೆರೆದಿದ್ದರಿಂದ ಈ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದೆ.
ಹುಮೈರಾ ತಮನ್ನಾ ಅವರ ದೂರಿನ ಪ್ರಕಾರ, ಅವರು ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ವಾಸಿಸುತ್ತಿದ್ದಾಗ ಮೊಹಮ್ಮದ್ ಫಯಾಜ್ ಎಂಬಾತನನ್ನು ಭೇಟಿಯಾಗಿದ್ದರು. ಫಯಾಜ್ ಮದುವೆಯಾಗುವುದಾಗಿ ಭರವಸೆ ನೀಡಿ, ತನ್ನ ಕುಟುಂಬಕ್ಕೆ ತಿಳಿಸದೆಯೇ ಮೇ ತಿಂಗಳಲ್ಲಿ ಆಕೆಯನ್ನು ಭಾರತಕ್ಕೆ ಕರೆತಂದಿದ್ದ ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಬಂದ ಮೂರು-ನಾಲ್ಕು ದಿನಗಳ ಬಳಿಕ ಹೈದರಾಬಾದ್‌ನಲ್ಲಿ ಇಬ್ಬರೂ ವಿವಾಹವಾಗಿದ್ದರು. ಮದುವೆಯಾದ ಸುಮಾರು ಒಂದು ತಿಂಗಳ ನಂತರ ಫಯಾಜ್ ತನ್ನ ಮೂವರು ಸ್ನೇಹಿತರಾದ ಅಹ್ಮದ್ ಮುಜೀಬ್, ನೂರ್ ಕಮಾಲ್ ಮತ್ತು ಜಿಯಾ-ಉರ್-ರೆಹಮಾನ್ ಅವರನ್ನು ತಾವು ವಾಸಿಸುತ್ತಿದ್ದ ಬಾಡಿಗೆ ಮನೆಗೆ ಕರೆತಂದಿದ್ದ ಎಂದು ಅವರು ಆರೋಪಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಈ ಮೂವರು ವ್ಯಕ್ತಿಗಳು ಕೂಡ ಮ್ಯಾನ್ಮಾರ್ ಮೂಲದವರಾಗಿದ್ದು, ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.ಫಯಾಜ್ ಮನೆಯನ್ನು ಹೊರಗಿನಿಂದ ಬೀಗ ಹಾಕಿ ಹೊರಗೆ ಹೋಗುತ್ತಿದ್ದನು. ಬಳಿಕ ತನ್ನ ಸ್ನೇಹಿತರನ್ನು ಮನೆಗೆ ಕಳುಹಿಸುತ್ತಿದ್ದನು. ಈ ವೇಳೆ ಅವರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ದೌರ್ಜನ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಅವರಲ್ಲಿ ಇಬ್ಬರು ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ತಿಳಿಸಿದ್ದಾರೆ.
ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂಬ ಅರಿವಿಲ್ಲದಿರುವುದು ಮತ್ತು ಭಯದ ಕಾರಣದಿಂದ ಈ ದೌರ್ಜನ್ಯದ ಬಗ್ಗೆ ತಾನು ಮೊದಲೇ ದೂರು ನೀಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.ಅಕ್ಟೋಬರ್ 23ರಂದು ಮನೆ ಮಾಲೀಕರು ಬಾಕಿ ಬಾಡಿಗೆ ಪಡೆಯಲು ಬಂದಾಗ, ಮನೆ ಹೊರಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದರು. ಅವರು ಬೀಗವನ್ನು ಒಡೆದು ತೆರೆದಾಗ ಮಹಿಳೆಗೆ ಅಲ್ಲಿಂದ ಹೊರಬರಲು ಸಾಧ್ಯವಾಯಿತು.
ನಂತರ ಅವರು ಮತ್ತೊಬ್ಬ ವ್ಯಕ್ತಿಯ ಮೊಬೈಲ್ ಫೋನ್ ಬಳಸಿ ತಮ್ಮ ಕುಟುಂಬವನ್ನು ಸಂಪರ್ಕಿಸಿದರು. ಬಳಿಕ ಅವರನ್ನು ಸಂಬಂಧಿಕರೊಬ್ಬರ ಮನೆಗೆ ಕರೆದೊಯ್ಯಲಾಯಿತು. ಅಕ್ಟೋಬರ್ 26ರಂದು ಮಹಿಳೆಯ ಸಂಬಂಧಿ ಮೊಹಮ್ಮದ್ ರಶೀದ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಅವರು ದೂರು ದಾಖಲಿಸಿದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪತಿ ಸೇರಿದಂತೆ ನಾಲ್ವರು ಪುರುಷರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಲಾಗಿದೆ.
