ವಿಶ್ವಸಂಸ್ಥೆ, ಅ. 27 (ಪಿಟಿಐ): ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರುವಾಗ, ವೀಟೋ (ನಿಷೇಧಾಧಿಕಾರ) ಇಲ್ಲದ ಹೊಸ ವರ್ಗದ ಶಾಶ್ವತ ಸದಸ್ಯರನ್ನು ಸೃಷ್ಟಿಸುವುದು ಅಂತಹ ಸದಸ್ಯರನ್ನು ದ್ವಿತೀಯ ದರ್ಜೆಯ ಸ್ಥಾನಮಾನಕ್ಕೆ ತಳ್ಳಿದಂತಾಗುತ್ತದೆ ಎಂದು ಭಾರತ ಪ್ರತಿಪಾದಿಸಿದೆ.
ಹೀಗಾದಲ್ಲಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಮೇಲಿನ ನಿಯಂತ್ರಣವು ಈಗಿರುವ ಐದು ಶಾಶ್ವತ ಸದಸ್ಯ ರಾಷ್ಟ್ರಗಳ ಕೈಯಲ್ಲೇ ಉಳಿಯುತ್ತದೆ. 15 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಅಮೆರಿಕ (ಯುಎಸ್) ಈ ಐದು ರಾಷ್ಟ್ರಗಳು ಶಾಶ್ವತ ಸದಸ್ಯರಾಗಿದ್ದು, ವೀಟೋ ಅಧಿಕಾರವನ್ನು ಹೊಂದಿವೆ.
ಇದಲ್ಲದೆ, ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ 10 ಅಶಾಶ್ವತ ಸದಸ್ಯ ರಾಷ್ಟ್ರಗಳು ಮಂಡಳಿಯಲ್ಲಿವೆ. ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಮಾತನಾಡಿ, ವೀಟೋ ಅಧಿಕಾರ ಅಸ್ತಿತ್ವದಲ್ಲಿರುವವರೆಗೂ ಸುಧಾರಿತ ಮಂಡಳಿಯ ಎಲ್ಲಾ ಶಾಶ್ವತ ಸದಸ್ಯರಿಗೂ ಈ ಅಧಿಕಾರ ಇರಬೇಕು ಎಂದು ಹೇಳಿದರು. ನ್ಯಾಯ ಮತ್ತು ಸಮಾನತೆಯ ದೃಷ್ಟಿಯಿಂದ ಎಲ್ಲಾ ಶಾಶ್ವತ ಸದಸ್ಯರಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳು ಇರಬೇಕೆಂದು ಅವರು ಒತ್ತಿ ಹೇಳಿದರು.
ವೀಟೋ ಅಧಿಕಾರದ ಕುರಿತು ಭಾರತದ ನಿಲುವು ತತ್ವಬದ್ಧವಾಗಿದೆ ಮತ್ತು ಎಲ್ಲರಿಗೂ ತಿಳಿದಿದೆ. ವೀಟೋ ಅಧಿಕಾರ ಇರುವವರೆಗೂ ಸುಧಾರಿತ ಮಂಡಳಿಯ ಎಲ್ಲಾ ಶಾಶ್ವತ ಸದಸ್ಯರಿಗೂ ಅದು ಲಭ್ಯವಿರಬೇಕು ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವೀಟೋ ಅಧಿಕಾರದ ಕುರಿತ ಚರ್ಚೆಯ ಸಂದರ್ಭದಲ್ಲಿ ನಡೆದ ಅಂತರಸರ್ಕಾರಿ ಮಾತುಕತೆಗಳ (ಐಜಿಎನ್) ಸಮಾವೇಶದಲ್ಲಿ ಮಾತನಾಡಿದ ಪರ್ವತನೇನಿ, ವೀಟೋ ಅಧಿಕಾರವಿಲ್ಲದ ದೀರ್ಘಕಾಲೀನ ಸದಸ್ಯರ ಹೊಸ ವರ್ಗವನ್ನು ಸೃಷ್ಟಿಸುವ ಮೂಲಕ ಭದ್ರತಾ ಮಂಡಳಿಯನ್ನು ವಿಸ್ತರಿಸುವುದು ಅವರನ್ನು ದ್ವಿತೀಯ ದರ್ಜೆಯ ಸದಸ್ಯರನ್ನಾಗಿ ಮಾಡುತ್ತದೆ. ಇದರಿಂದ ಪಿ5 (ಐದು ಶಾಶ್ವತ ಸದಸ್ಯ ರಾಷ್ಟ್ರಗಳು) ಗುಂಪಿನ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದರು.
ವೀಟೋ ಅಧಿಕಾರವಿರಲಿ ಅಥವಾ ಇಲ್ಲದಿರಲಿ, ಶಾಶ್ವತ ಸದಸ್ಯರ ಹೊಸ ವರ್ಗವನ್ನು ಸೃಷ್ಟಿಸುವುದು ಈಗಾಗಲೇ ಜಟಿಲವಾಗಿರುವ ಚರ್ಚೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಮತ್ತು ನಾವು ಸರಿಪಡಿಸಲು ಪ್ರಯತ್ನಿಸುತ್ತಿರುವ ಅಸಮಾನತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಅವರು ಹೇಳಿದರು.
ಕಾಲಕಾಲಕ್ಕೆ ನಡೆಯುವ ಚುನಾವಣೆಗಳು ಮತ್ತು ಶಾಶ್ವತ ಸದಸ್ಯತ್ವ ಎಂಬ ಪರಿಕಲ್ಪನೆಗಳು ಮೂಲಭೂತವಾಗಿ ಪರಸ್ಪರ ವಿರುದ್ಧವಾಗಿವೆ ಎಂದು ಈ ರಾಜತಾಂತ್ರಿಕರು ಹೇಳಿದರು. ಇತಿಹಾಸ ನಮಗೆ ಒಂದು ಪಾಠವನ್ನು ಕಲಿಸಿದೆ ಎಂದು ಹೇಳಿದ ಅವರು, 1965ರಲ್ಲಿ ಭದ್ರತಾ ಮಂಡಳಿಯನ್ನು ವಿಸ್ತರಿಸಿದಾಗ ಐದು ಶಾಶ್ವತ ಸದಸ್ಯರನ್ನು ಹಾಗೆಯೇ ಉಳಿಸಿಕೊಂಡು, ಅಶಾಶ್ವತ ಸದಸ್ಯರ ಸಂಖ್ಯೆಯನ್ನು ಆರರಿಂದ ಹತ್ತಕ್ಕೆ ಹೆಚ್ಚಿಸಲಾಯಿತು ಎಂಬುದನ್ನು ನೆನಪಿಸಿದರು.
ಈ ಬದಲಾವಣೆಯಿಂದಾಗಿ ಶಾಶ್ವತ ಸದಸ್ಯರು ಮತ್ತು ಚುನಾಯಿತ ಸದಸ್ಯರ ನಡುವಿನ ಅನುಪಾತವು 5:6ರಿಂದ 5:10ಕ್ಕೆ ಬದಲಾಯಿತು. ಇದರಿಂದ ಪಿ5 ರಾಷ್ಟ್ರಗಳ ಸಾಪೇಕ್ಷ ಶಕ್ತಿ ಮತ್ತಷ್ಟು ಬಲಗೊಂಡಿತು ಎಂದು ಪರ್ವತನೇನಿ ವಿವರಿಸಿದರು.
ಭಾರತವು ನಿರಂತರವಾಗಿ ಶಾಶ್ವತ ಮತ್ತು ಅಶಾಶ್ವತ ಸದಸ್ಯತ್ವದ ಎರಡೂ ವಿಭಾಗಗಳನ್ನು ವಿಸ್ತರಿಸಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ. ಕೇವಲ ಅಶಾಶ್ವತ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕಡೆಗೆ ಮಾತ್ರ ಗಮನಹರಿಸಿದರೆ, ಸುಧಾರಣಾ ಪ್ರಯತ್ನಗಳು ವೈಫಲ್ಯದ ಅಂಚಿಗೆ ತಲುಪುತ್ತವೆ ಎಂದು ಅದು ಎಚ್ಚರಿಸಿದೆ.
1945ರಲ್ಲಿ ಸ್ಥಾಪನೆಯಾದ ಭದ್ರತಾ ಮಂಡಳಿಯು 21ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾಗಿಲ್ಲ ಮತ್ತು ಇಂದಿನ ಭೌಗೋಳಿಕ-ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ವಾದಿಸುತ್ತಾ, ಮಂಡಳಿಯಲ್ಲಿ ಸುಧಾರಣೆ ತರುವ ದೀರ್ಘಕಾಲದ ಪ್ರಯತ್ನಗಳಲ್ಲಿ ನವದೆಹಲಿ ಮುಂಚೂಣಿಯಲ್ಲಿದೆ. ಭದ್ರತಾ ಮಂಡಳಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ತನಗೆ ಶಾಶ್ವತ ಸ್ಥಾನ ಸಿಗಲು ಭಾರತ ಸಂಪೂರ್ಣ ಅರ್ಹವಾಗಿದೆ ಎಂದು ಪದೇಪದೇ ಒತ್ತಿಹೇಳಿದೆ.
