ನವದೆಹಲಿ, ಅ. 27 (ಪಿಟಿಐ): ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ.ಚಂದಾ ಚೋರ್‌ಗಳು (ದೇಣಿಗೆ ಕಳ್ಳರು) ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಕಾಂಗ್ರೆಸ್, ದೇಶವು ಈಗ ದೇಣಿಗೆಗಳ ಲೆಕ್ಕವನ್ನು ಕೇಳುತ್ತಿದೆ ಮತ್ತು ಭಕ್ತರ ನಂಬಿಕೆಯು ಯಾರಿಗೂ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹಕ್ಕನ್ನು ನೀಡುವುದಿಲ್ಲ ಎಂದು ಪ್ರತಿಪಾದಿಸಿದೆ.
ಲೆಕ್ಕಪರಿಶೋಧನೆಗಳಲ್ಲಿ (ಆಡಿಟ್) ವ್ಯಕ್ತವಾದ ಎಚ್ಚರಿಕೆಗಳು, ಗುತ್ತಿಗೆಗಳಲ್ಲಿ ನಡೆದಿದೆ ಎನ್ನಲಾದ ಕಮಿಷನ್ ಹಗರಣ, ದುರುಪಯೋಗದ ಸಂಪೂರ್ಣ ವ್ಯಾಪ್ತಿ ಮತ್ತು ಎಲ್ಲಾ ಅಮೂಲ್ಯ ದೇಣಿಗೆಗಳ ಸಂಪೂರ್ಣ ಲೆಕ್ಕಪತ್ರವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದೆ.
ಚಂದಾ ಚೋರಿ (ದೇಣಿಗೆ ಕಳ್ಳತನ), ಆಸ್ಥಾ ಧೋಖಾ (ನಂಬಿಕೆಗೆ ದ್ರೋಹ). ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಜಯ್ ಸಿಂಗ್ ಬಿಷ್ಟ್ (ಯೋಗಿ ಆದಿತ್ಯನಾಥ್) ಅವರು ತಮ್ಮ ಮೌನ ಮುರಿಯಬೇಕು. ಈ ದೇಶಕ್ಕೆ ತಿಳಿಯಬೇಕಿದೆ: ಈ ಚಂದಾ ಚೋರ್‌ಗಳು ಯಾರು? ಅವರ ಸಹಚರರು ಯಾರು? ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ಏಕೆ ನಡೆಯುತ್ತಿಲ್ಲ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಪದೇಪದೇ ಎಚ್ಚರಿಕೆ ನೀಡಿದರೂ ಕಳ್ಳತನಗಳು ಹೇಗೆ ಮುಂದುವರಿದವು, ಇದಕ್ಕೆ ಯಾರು ಹೊಣೆ ಮತ್ತು ಪ್ರಮುಖ ಅಪರಾಧಿಗಳನ್ನು ಏಕೆ ಇನ್ನೂ ರಕ್ಷಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಲೆಕ್ಕಪರಿಶೋಧನಾ ಸಂಸ್ಥೆ ನೀಡಿದ ಸಲಹೆಯನ್ನು ಕಸದ ಬುಟ್ಟಿಗೆ ಎಸೆಯುವಂತೆ ಏಕೆ ನಿರ್ಲಕ್ಷಿಸಲಾಯಿತು ಎಂದು ಜೈರಾಮ್ ರಮೇಶ್ ಕೇಳಿದ್ದಾರೆ.
ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಎಂಜಿನಿಯರ್ ಒಬ್ಬರು, ಆರ್ಥಿಕ ಅಕ್ರಮಗಳ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕಾಗಿ ತಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ.
ದೀನನಾಥ್ ವರ್ಮಾ ಅವರು ಚಂಪತ್ ರಾಯ್ ಅವರಿಗೆ ಈ ವಿಷಯಗಳನ್ನು ತಿಳಿಸಿದ್ದಾಗಿ ಆರೋಪಿಸಿದ್ದಾರೆ. ಗುತ್ತಿಗೆಗಳಲ್ಲಿ ಶೇ. 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ, ಅಸ್ತಿತ್ವದಲ್ಲಿಲ್ಲದ ವ್ಯಕ್ತಿಗಳನ್ನು ನೌಕರರ ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಬಿಲ್‌ಗಳಲ್ಲಿ ಸಾಮಗ್ರಿಗಳ ಪ್ರಮಾಣವನ್ನು ಹೆಚ್ಚಿಸಿ ತೋರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮೌಲ್ಯಯುತ ದೇಣಿಗೆಗಳಿಗೂ ಯಾವುದೇ ರಸೀದಿಗಳನ್ನು ನೀಡದಿರುವ ವಿಷಯವನ್ನೂ ರಮೇಶ್ ಪ್ರಸ್ತಾಪಿಸಿದ್ದಾರೆ. ತನಿಖೆಯ ವೇಳೆ ಅತ್ಯಂತ ಮೌಲ್ಯಯುತವಾದ ವಸ್ತುಗಳನ್ನು ದೇಣಿಗೆಯಾಗಿ ನೀಡಲಾದ ಅನೇಕ ನಿದರ್ಶನಗಳು ಬೆಳಕಿಗೆ ಬಂದಿದ್ದು, ಆದರೆ ಅವುಗಳಿಗೆ ಸಂಬಂಧಿಸಿದಂತೆ ದಾನಿಗಳಿಗೆ ಯಾವುದೇ ರಸೀದಿಗಳನ್ನು ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
2020ರಲ್ಲೇ ಅಪಾಯಗಳ ಬಗ್ಗೆ ಲಿಖಿತವಾಗಿ ಸ್ಪಷ್ಟವಾಗಿ ಎಚ್ಚರಿಸಿದ್ದರೂ ಯಾವುದೇ ಕ್ರಮ ಏಕೆ ಕೈಗೊಳ್ಳಲಿಲ್ಲ? ದೂರು ನೀಡಿದ ವ್ಯಕ್ತಿಯನ್ನೇ ಏಕೆ ಕೆಲಸದಿಂದ ತೆಗೆದುಹಾಕಲಾಯಿತು? ಭಕ್ತರು ನೀಡಿದ ಮೌಲ್ಯಯುತ ದೇಣಿಗೆಗಳಿಗೆ ಏಕೆ ರಸೀದಿಗಳನ್ನು ನೀಡಲಿಲ್ಲ? ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಒಂದೆಡೆ ಕಳ್ಳರು ತಮ್ಮ ಕಳ್ಳತನವನ್ನು ಮುಂದುವರಿಸಿದ್ದರೆ, ಇನ್ನೊಂದೆಡೆ ತಾವೂ ಕಾವಲುಗಾರರು ಎಂದು ಘೋಷಿಸಿಕೊಂಡಿದ್ದ ಆರ್‌ಎಸ್‌ಎಸ್-ಬಿಜೆಪಿಯೊಂದಿಗೆ ಗುರುತಿಸಿಕೊಂಡವರು ಗಾಢ ನಿದ್ರೆಯಲ್ಲಿದ್ದರು. ಇದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ದೈವಿಕ ಆಸ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತಿರುವ, ಅಂದರೆ ಟ್ರಸ್ಟ್‌ನ ಮೇಲ್ವಿಚಾರಣೆ ಮತ್ತು ಕಾವಲು ಜವಾಬ್ದಾರಿ ಹೊಂದಿರುವವರು, ಕಾಣಿಕೆಗಳು ಮತ್ತು ಅಮೂಲ್ಯ ದೇಣಿಗೆಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿಯೇ ಮುಂದುವರಿಯಲು ಬಿಟ್ಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರಮೇಶ್ ಹೇಳಿದ್ದಾರೆ.
