ನವದೆಹಲಿ,ಅ.27- ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ವೋಟ್ ಚೋರಿ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಬ್ಲಾಕ್ ನಡೆಸಲು ಉದ್ದೇಶಿಸಿರುವ ಬೃಹತ್ ರ್ಯಾಲಿಗೆ ಕೆಲವೇ ದಿನಗಳಿರುವಾಗ, ಬಿಜೆಪಿ ನಾಳೆ ದೆಹಲಿಯಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿದೆ.
ಬುಧವಾರ ಸಂಜೆ 4 ಗಂಟೆಗೆ ಚಾಂದನಿ ಚೌಕ್ನಲ್ಲಿ ಆರಂಭವಾಗಲಿರುವ ಪಾದಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವ ವಹಿಸಲಿದ್ದಾರೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಹರ್ಷ ಮಲ್ಹೋತ್ರಾ, ಸಂಸದರು ಹಾಗೂ ಪಕ್ಷದ ಇತರ ಪ್ರಮುಖ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಮೆರವಣಿಗೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.ಚುನಾವಣಾ ಆಯೋಗ ನಡೆಸುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ಎಸ್ಐಆರ್ ಮೂಲಕ ಮತಗಳ್ಳತನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಬ್ಲಾಕ್ನ ಪಕ್ಷಗಳು ಆರೋಪಿಸುತ್ತಿವೆ. ಅಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಈ ಆರೋಪಗಳನ್ನು ತಳ್ಳಿಹಾಕುತ್ತಿರುವ ಬಿಜೆಪಿ, ಎಸ್ಐಆರ್ ಕುರಿತು ವಿರೋಧ ಪಕ್ಷಗಳು ಜನರನ್ನು ದಾರಿತಪ್ಪಿಸುತ್ತಿವೆ ಎಂದು ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ ಘೋಷಣೆಯಡಿ ರಾಷ್ಟ್ರವ್ಯಾಪಿ ಅಭಿಯಾನವನ್ನೂ ಆರಂಭಿಸಿದೆ. ನಾಳಿನ ಪಾದಯಾತ್ರೆ ಈ ಅಭಿಯಾನದ ಭಾಗವಾಗಿದೆ.
