ಬೆಂಗಳೂರು, ಅ.27- ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಲು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ನವೆಂಬರ್ ಒಂದರಂದು ಭಾನುವಾರವಾಗಿದ್ದು, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನಿಯಮಾನುಸಾರ, ಕಡ್ಡಾಯವಾಗಿ ಹಾಗೂ ಗೌರವಪೂರ್ವಕವಾಗಿ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಸಂಬಂಧಿಸಿದ ಎಲ್ಲಾಅಧಿಕಾರಿಗಳಿಗೆ ಹಾಗೂ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆಯುಕ್ತರು, ರಾಷ್ಟ್ರೀಯ ಹಬ್ಬಗಳನ್ನು ಹಾಗೂ ನಾಡ ಹಬ್ಬವಾದ ಕರ್ನಾಟಕರಾಜ್ಯೋತ್ಸವ ಮತ್ತು ಇತರೆ ಪ್ರಮುಖ ಜಯಂತಿಗಳನ್ನು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತುಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನಿಯಮಾನುಸಾರ ಕಡ್ಡಾಯವಾಗಿ ಆಯಾದಿನಗಳಂದು ಗೌರವ ಪೂರ್ವಕವಾಗಿ ಆಚರಣೆ ಮಾಡಲು ತಿಳಿಸಿದ್ದಾರೆ.
