ಬೆಂಗಳೂರು,ಅ.26- ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಆನೇಕಲ್ನಲ್ಲಿ ಪೋಲಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ ಅನುದಾನಿತ ಶಾಲೆಯ ಶಿಕ್ಷಕ ಗೋಪಾಲ ವೈ ವಿರುದ್ಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಚುನಾವಣಾ ಮತಗಟ್ಟೆ ಅಧಿಕಾರಿ ರವಿಪ್ರಸಾದ್ ಅವರು ದೂರು ನೀಡಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಕಳೆದ ಮೂರು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರ ಪರವಾಗಿ ಪೋಲಿಂಗ್ ಏಜೆಂಟ್ ಆಗಿ ಶಿಕ್ಷಕ ಗೋಪಾಲ ಅವರು ಕಾರ್ಯನಿರ್ವಹಿಸುತ್ತಿದ್ದರು.ನಿಯಮಗಳ ಪ್ರಕಾರ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳ ಶಿಕ್ಷಕರು ಯಾವುದೇ ರಾಜಕೀಯ ಪಕ್ಷದ ಪರ ಚುನಾವಣಾ ಏಜೆಂಟ್ ಆಗಿ ಕೆಲಸ ಮಾಡುವಂತಿಲ್ಲ.
ಕೆಆರ್ಎಸ್ ಪಕ್ಷದ ಅಭ್ಯರ್ಥಿಯ ಪರ ಚುನಾವಣಾ ಏಜೆಂಟ್ ಆಗಿ ಮತಗಟ್ಟೆ ವೀಕ್ಷಣೆಗಾಗಿ ಬಂದಿದ್ದ ಮುಖಂಡ ರಘುಪತಿ ಭಟ್ ಅವರು ಶಿಕ್ಷಕ ಗೋಪಾಲ ಅವರನ್ನು ಗುರುತಿಸಿ ಪೋಲಿಂಗ್ ಏಜೆಂಟ್ ಆಗಿರುವುದಕ್ಕೆ ಆಕ್ಷೇಪಿಸಿರುತ್ತಾರೆ.
ನಂತರ ಮತಗಟ್ಟೆ ಅಧಿಕಾರಿ ಗೋಪಾಲ ಅವರ ಗುರುತಿನ ಚೀಟಿ ಪರಿಶೀಲಿಸಿದಾಗ ಸೋಲೂರಿನ ವಿನೋಭ ಭಾವೆ ಪ್ರೌಢಶಾಲೆಯ ಸರ್ಕಾರಿ ವೃತ್ತಿ ಶಿಕ್ಷಕರು ಎಂಬುವುದು ಕಂಡು ಬಂದಿದೆ.ಈ ಸಂಬಂಧ ಮತಗಟ್ಟೆ ಅಧಿಕಾರಿ ರವಿಪ್ರಸಾದ್ ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
