ಬೆಂಗಳೂರು,ಅ.26-ನಟ ಧನ್ವೀರ್ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೂರು ಪ್ರತ್ಯೇಕ ದೂರುಗಳು ದಾಖಲಾಗಿವೆ.ಧನ್ವೀರ್ ಮತ್ತು ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ನಡುವಿನ ವೈಷಮ್ಯದಿಂದಾಗಿ ರಾಜರಾಜೇಶ್ವರಿ ನಗರ, ಬ್ಯಾಟರಾಯಪುರ ಹಾಗೂ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಧನ್ವೀರ್ ವಿರುದ್ಧ ಎನ್‌ಸಿಆರ್ ದಾಖಲಾಗಿವೆ.
ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ಅವರಿಗೆ ಧನ್ವೀರ್ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರ್‌ಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎನ್‌ಸಿಆರ್‌ಗೆ ಸಂಬಂಧಿಸಿದಂತೆ, ಧನ್ವೀರ್ ಅವರು ತಮ ಹಾಗೂ ಸ್ನೇಹಿತರ ವಿಮಾನ ಟಿಕೇಟ್ ಬುಕ್ಕಿಂಗ್‌ಗಾಗಿ ಐದು ಲಕ್ಷ ರೂ. ಹಣ ಪಡೆದು ವಾಪಸ್ ನೀಡಿಲ್ಲ. ಅಲ್ಲದೇ ತಮ ಕಾರನ್ನು ಪಡೆದುಕೊಂಡು ಅದನ್ನೂ ಹಿಂದಿರುಗಿಸಿಲ್ಲ.ಹಣ ಮತ್ತು ಕಾರು ವಾಪಸ್ ಕೇಳಿದ್ದಕ್ಕೆ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ಗೌರವ್ ಖಾಟೇರ್ ಎಂಬುವವರು ದೂರು ನೀಡಿದ್ದಾರೆ.
ಮೂರನೇ ಪ್ರಕರಣದಲ್ಲಿ ಧನ್ವೀರ್ ಮನೆ ಬಳಿ ನಡೆದ ಗಲಾಟೆ ಸಂದರ್ಭದಲ್ಲಿ ಮಧ್ಯಸ್ಥಿಕೆಗೆ ಹೋಗಿದ್ದ ಭೋಜರಾಜ್ ರೈ ಅವರಿಗೆ ಮೊಬೈಲ್ ಕರೆ ಮಾಡಿ ಧನ್ವೀರ್ ಧಮ್ಕಿ ಹಾಕಿದ್ದಾರೆಂದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.ಪೊಲೀಸರು ಈ ಮೂರು ಎನ್‌ಸಿಆರ್ ದೂರುಗಳ ಅಡಿಯಲ್ಲಿ ಧನ್ವೀರ್ ಅವರಿಗೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.
