ಬೆಂಗಳೂರು, ಏ.8- ಯಾವುದೇ ಚುನಾವಣೆಗಳು ಬರಲಿ, ಬೆಂಗಳೂರಿ ನಲ್ಲಿ ಮತದಾನ ಪ್ರಮಾಣ ಕಡಿಮೆಯಾಗು ತ್ತಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕಾಗಿ ಭಾರತೀಯ ಚುನಾವಣಾ ಆಯೋಗ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಈಗಾಗಲೇ ನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು ಬಿಬಿಎಂಪಿ ಸಹಯೋಗದೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಪ್ರತಿ ನಿತ್ಯ ಮನೆಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಧ್ವನಿ ವರ್ಧಕ ಹಾಗೂ ಬ್ಯಾನರ್ಗಳನ್ನು ಹಾಕಿಕೊಂಡು ಜನತೆಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪೌರ ಕಾರ್ಮಿಕರು ಬರೀ ತ್ಯಾಜ್ಯ ಸಂಗ್ರಹಿಸುವುದಷ್ಟೇ ಅಲ್ಲದೆ ನಗರದ ಜನತೆಗೆ ಮತದಾನದ ಅರಿವನ್ನು ಕೂಡ ಮೂಡಿಸುತ್ತಿದ್ದಾರೆ.
ಮತದಾನದ ದಿನ ಸಾಮಾನ್ಯವಾಗಿ ಎಲ್ಲ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ರಜೆ ನೀಡಲಾಗುತ್ತಿದೆ. ಒಂದು ದಿನ ರಜೆ ಸಿಗುತ್ತದೆ ಎಂದು ಅಂದು ಕೆಲವು ಜನ ಊರುಗಳತ್ತ ಟ್ರಿಪ್ ಹೋಗುತ್ತಾರೆ. ಇನ್ನೂ ಕೆಲವರು ಮನೆಯಲ್ಲೇ ಇದ್ದು ಮತದಾನಕ್ಕೆ ನಿರಾಸಕ್ತಿ ತೋರುತ್ತಾರೆ. ಇದರಿಂದ ಮತದಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿ ಇಂದು ತಿಳುವಳಿಕೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ.
ಕೆಎಸ್ಆರ್ಟಿಸಿ ಈಗಾಗಲೇ ತನ್ನದೇ ಆದ ರೀತಿಯಲ್ಲಿ ಜಾಗೃತಿ ಹಮ್ಮಿಕೊಂಡಿದ್ದು, ಟಿಕೆಟ್ನಲ್ಲಿ ತಪ್ಪದೆ ಮತದಾನ ಮಾಡಿ ಎಂದು ಮುದ್ರಿಸಿ ಅರಿವು ಮೂಡಿಸುತ್ತದೆ. ಅದೇ ರೀತಿ ಸ್ವೀಪ್ ಸಮಿತಿ ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ.