ಹಾಸನ,ಅ.28-ಹಾಸನಾಂಬೆ ಉತ್ಸವವು ಜಿಲ್ಲೆಗೆ ಸೀಮಿತವಾಗದೇ ನಾಡಹಬ್ಬವಾಗಿ ರೂಪುಗೊಂಡಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅಗತ್ಯವಾದ ಮೂಲಸೌಕರ್ಯ ಹಾಗೂ ಹೆಚ್ಚುವರಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಹಾಸನಾಂಬೆ ಉತ್ಸವದ ಪೂರ್ವಸಿದ್ಧತೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಸವವನ್ನು ಕಳೆದ ಬಾರಿಗಿಂತಲೂ ಹೆಚ್ಚಿನ ಸುವ್ಯವಸ್ಥೆಯೊಂದಿಗೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ನಾಡಿನ ಹಿತದಷ್ಟಿಯಿಂದ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿದ್ದು, ಭಾರಿ ಸಂಖ್ಯೆಯಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇಂದು ಸಂಜೆಯೊಳಗೆ ಎಲ್ಲ ಪೂರ್ವಸಿದ್ಧತಾ ಕಾರ್ಯಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಗ್ರಾಮೀಣ ವೈಭವಕ್ಕೆ ಆದ್ಯತೆ: ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದಸರಾ ಮಾದರಿಯಲ್ಲಿ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಕುಸ್ತಿ, ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯಗಳು ಪ್ರಮುಖ ಆಕರ್ಷಣೆಯಾಗಲಿವೆ. ಹಳ್ಳಿಕಾರ್ ಸೇರಿದಂತೆ ವಿವಿಧ ತಳಿಗಳ ಜಾನುವಾರು ಪ್ರದರ್ಶನ, ಟಗರು ಪ್ರದರ್ಶನ ಹಾಗೂ ಶ್ವಾನ ಪ್ರದರ್ಶನಗಳೂ ನಡೆಯಲಿವೆ ಎಂದು ತಿಳಿಸಿದರು.
ಕುಸ್ತಿ ಪಂದ್ಯಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ದಸರಾ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಂಡಿದ್ದ ಕುಸ್ತಿಪಟುಗಳೂ ಸೇರಿದಂತೆ ಸುಮಾರು 400 ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿರುವುದು ಉತ್ಸವದ ವಿಶೇಷತೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಹಾಸನಾಂಬ ಜಾತ್ರೆಗೆ 2 ಸಾವಿರ ಪೊಲೀಸರ ಭದ್ರತೆ
ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ಬೋರಲಿಂಗಯ್ಯ ತಿಳಿಸಿದರು. ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಅವರು, ನಾಳೆಯಿಂದ ನ. 11ರವರೆಗೆ ನಡೆಯಲಿರುವ ಧರ್ಮದರ್ಶನದ ಸರದಿಯ ಬ್ಯಾರಿಕೇಡ್ ವ್ಯವಸ್ಥೆ, ವಿಶೇಷ ದರ್ಶನದ ವ್ಯವಸ್ಥೆಗಳು, ವಾಹನಗಳ ಸಂಚಾರ ನಿಯಂತ್ರಣ, ಪಾರ್ಕಿಂಗ್ ಸ್ಥಳಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯುವ ಪ್ರದೇಶ, ಜಾತ್ರೆಯ ಬಂದೋಬ್ತ್ ವ್ಯವಸ್ಥೆಗಳನ್ನು ಪರಿಶೀಲಿಸಿ ನಂತರ ಮಾತನಾಡಿದರು.
ಮೂರು ಪಾಳಿಗಳಲ್ಲಿ ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರು ಯಾವುದೇ ತೊಂದರೆಯಿಲ್ಲದೆ ದೇವಿಯ ದರ್ಶನ ಪಡೆಯಲು ಹಾಗೂ ಜಾತ್ರೆಯ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಹಾಸನ ಸೇರಿದಂತೆ ದಕ್ಷಿಣ ವಲಯದ ನಾಲ್ಕು ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಹೊರ ಜಿಲ್ಲೆಗಳಿಂದ ಗಹರಕ್ಷಕ ದಳದ ಸಿಬ್ಬಂದಿ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ತುಕಡಿಗಳನ್ನೂ ಕರೆಸಿಕೊಳ್ಳಲಾಗುವುದು. ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಭಕ್ತರ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತಾ ಜವಾಬ್ದಾರಿ ವಹಿಸಲಿದ್ದಾರೆ ಎಂದು ಹೇಳಿದರು.ಸುಗಮ ದರ್ಶನಕ್ಕೆ ಕ್ರಮ:ಧರ್ಮದರ್ಶನದ ಸರದಿಯ ಬ್ಯಾರಿಕೇಡ್ ವ್ಯವಸ್ಥೆಯೊಂದಿಗೆ 300 ರೂ. ಮತ್ತು 1 ಸಾವಿರ ರೂ. ವಿಶೇಷ ದರ್ಶನ, ಗೋಲ್ಡ್ ಪಾಸ್ ಹಾಗೂ ಶಿಷ್ಟಾಚಾರದಡಿ ದರ್ಶನ ಪಡೆಯುವ ವ್ಯವಸ್ಥೆಗಳನ್ನೂ ಪರಿಶೀಲಿಸಲಾಗಿದೆ.
ವಾಹನಗಳ ಸುಗಮ ಸಂಚಾರಕ್ಕೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ಪಾರ್ಕಿಂಗ್ ಸ್ಥಳಗಳನ್ನು ಸುಲಭವಾಗಿ ಗುರುತಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ವಯೋವದ್ಧರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಸರದಿಯ ವ್ಯವಸ್ಥೆ ಮಾಡಲಾಗಿದ್ದು, ಭಕ್ತರ ಸುರಕ್ಷತೆ ಮತ್ತು ಸುಗಮ ದರ್ಶನಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಎಎಸ್ಪಿ ಶ್ರೀನಿಧಿ, ಡಿವೈಎಸ್ಪಿ ಗಂಗಾಧರಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಜೊತೆಯಲ್ಲಿದ್ದರು.
