ಬೆಂಗಳೂರು,ಅ.28- ಆಡಳಿತ ಮತ್ತು ಪ್ರತಿಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ವಿಧಾನಪರಿಷತ್ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಎಲ್ಲಾ ಎನ್ಡಿಎ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ನ ಎಲ್ಲಾ ಅಭ್ಯರ್ಥಿಗಳು ಪರಾಭವಗೊಳ್ಳುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.ಪ್ರತಿಪಕ್ಷ ಬಿಜೆಪಿಯ ಎಲ್ಲಾ 3 ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಕಾಂಗ್ರೆಸ್ನ 4 ಅಭ್ಯರ್ಥಿಗಳು ಸೋತಿದ್ದಾರೆ.
ಬಿಜೆಪಿ 3 ಸ್ಥಾನಗಳನ್ನು ಉಳಿಸಿಕೊಂಡಿದ್ದರೆ ಕಾಂಗ್ರೆಸ್ ಇದ್ದ 1 ಸ್ಥಾನವನ್ನು ಕಳದುಕೊಂಡಿದೆ. ಆದರೆ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಸ್ಪರ್ಧಿಸಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ವಿಧಾನಪರಿಷತ್ನ 2 ಶಿಕ್ಷಕರ ಮತ್ತು 2 ಪದವೀಧರ ಕ್ಷೇತ್ರಗಳ ದ್ವೈ ವಾರ್ಷಿಕ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಅಧಿಕೃತ ಫಲಿತಾಂಶ ಪ್ರಕಟವಾಗಿದೆ.ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ ಅವರ ಸಮೀಪದ ಪ್ರತಿಸ್ಪರ್ಧಿ ಮಾಜಿ ಉಪಸಭಾಪತಿ ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಮಣಿಸಿದ್ದಾರೆ.
ರಂಗನಾಥ ಅವರಿಗೆ 10,810 ಮತಗಳು ದೊರೆತರೆ ಪುಟ್ಟಣ್ಣ ಅವರಿಗೆ 9,902 ಮತಗಳು ದೊರೆತಿವೆ. ಉಳಿದ ನಾಲ್ವರು ಪಕ್ಷೇತರ ಅಭ್ಯರ್ಥಿಗಳಿಗೆ ಅತ್ಯಲ್ಪ ಮತಗಳು ಬಿದ್ದಿವೆ. ಚಲಾವಣೆಯಾಗಿದ್ದ 22,913 ಮತಗಳಲ್ಲಿ 21,056 ಮತಗಳು ಸಿಂಧುವಾಗಿದ್ದು, 1,857 ಮತಗಳು ತಿರಸ್ಕೃತಗೊಂಡಿವೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಅವರು 3,397 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಭ್ಯರ್ಥಿ ಶರಣಪ್ಪ ಮಟ್ಟೂರ ಪರಾಭವಗೊಂಡಿದ್ದಾರೆ. ಶಶಿಲ್ ನಮೋಶಿ 15,596 ಮತಗಳನ್ನು ಪಡೆದಿದ್ದರೆ, ಶರಣಪ್ಪ ಮಟ್ಟೂರ ಅವರು 12,299 ಮತಗಳನ್ನು ಪಡೆದಿದ್ದಾರೆ.ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ ಅವರು 23,098 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಅವರು ಪರಾಭವಗೊಂಡಿದ್ದು, 42,922 ಮತಗಳನ್ನು ಪಡೆದಿದ್ದಾರೆ. ಸುರೇಶ ಅವರು 66,020 ಮತಗಳನ್ನು ಪಡೆದಿದ್ದಾರೆ.ಉಳಿದ 8 ಅಭ್ಯರ್ಥಿಗಳು 4 ಅಂಕಿಗಳಿಗಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ 1,32,138 ಮತಗಳಲ್ಲಿ 1,12,026 ಮತಗಳು ಸಿಂಧುವಾಗಿದ್ದು, 20,076 ಮತಗಳು ತಿರಸ್ಕೃತಗೊಂಡಿವೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಅವರು 9,323 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಇವರು 33,711 ಮತಗಳನ್ನು ಪಡೆದಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ 24,388 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಚಲಾವಣೆಯಾಗಿದ್ದ 73,691 ಮತಗಳಲ್ಲಿ 63,446 ಮತಗಳು ಸಿಂಧುವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿವೆ.ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಶಶಿಲ್ ಜಿ. ನಮೋಶಿ, ಎಸ್.ವಿ.ಸಂಕನೂರ, ಚಿದಾನಂದ ಎಂ. ಗೌಡ ಅವರು ನ.11 ರಂದು ನಿವೃತ್ತಿಯಾಗಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗ ಅ.23 ರಂದು ಮತದಾನ ನಡೆಸಿತ್ತು. ನಿನ್ನೆ ಬೆಳಗ್ಗೆಯಿಂದ ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆಯು ಇಂದು ಬೆಳಗ್ಗೆ ಮುಕ್ತಾಯಗೊಂಡಿದ್ದು, ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ವಿಧಾನಪರಿಷತ್ನ ಈ ಚುನಾವಣೆ ವಿದ್ಯಾವಂತರ ಮತ್ತು ಸುಶಿಕ್ಷಿತ ಮತದಾರರು ನೀಡಿರುವ ಜನಾದೇಶವಾಗಿದೆ.ಎನ್ಡಿಎ ಮೈತ್ರಿಕೂಟದ ಬಿಜೆಪಿ-ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಉತ್ಸಾವವನ್ನು ಈ ಚುನಾವಣಾ ಫಲಿತಾಂಶ ಮೂಡಿಸಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ನಲ್ಲಿನ ಉತ್ಸಾಹಕ್ಕೆ ತಣ್ಣಿರೆರಚಿದಂತಾಗಿದೆ.
