Homeರಾಜಕೀಯ"ಪರಿಷತ್ ಚುನಾವಣೆ ಫಲಿತಾಂಶ : ಭ್ರಷ್ಟಾಚಾರಪೀಡಿತ ಕಾಂಗ್ರೆಸ್‌‍ ಸರ್ಕಾರಕ್ಕೆ ಜನ ಕೊಟ್ಟ ಉತ್ತರ ಎಂದ ವಿಜಯೇಂದ್ರ

“ಪರಿಷತ್ ಚುನಾವಣೆ ಫಲಿತಾಂಶ : ಭ್ರಷ್ಟಾಚಾರಪೀಡಿತ ಕಾಂಗ್ರೆಸ್‌‍ ಸರ್ಕಾರಕ್ಕೆ ಜನ ಕೊಟ್ಟ ಉತ್ತರ ಎಂದ ವಿಜಯೇಂದ್ರ

ಬೆಂಗಳೂರು,ಅ.28- ಕರ್ನಾಟಕ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ನಾಲ್ಕೂ ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ರಾಜ್ಯದ ಕಾಂಗ್ರೆಸ್‌‍ ಸರ್ಕಾರಕ್ಕೆ ಮತದಾರರು ನೀಡಿದ ಉತ್ತರವಾಗಿದೆ. ಈ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎನ್‌ಡಿಎ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಅವರು, ತಮ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ.ಗುರುಪರಂಪರೆಯ ಸಂಸ್ಕೃತಿ ಮತ್ತು ವಿದ್ವತ್‌ಪೂರ್ಣ ಸಮಾಜದ ಪ್ರತಿನಿಧಿಗಳಾದ ಶಿಕ್ಷಕರು ಹಾಗೂ ಪದವೀಧರರು ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟಾಚಾರಪೀಡಿತ ಹಾಗೂ ಅಭಿವೃದ್ಧಿಶೂನ್ಯ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ವಿಜಯೇಂದ್ರ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರದಲ್ಲಿ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ನಡೆಸುವ ಮತ್ತು ಚುನಾವಣಾ ವ್‌ಯವಸ್ಥೆಯನ್ನು ಪ್ರಶ್ನಿಸುವ ಶಕ್ತಿಗಳಿಗೆ ಈ ಫಲಿತಾಂಶ ತಕ್ಕ ಉತ್ತರವಾಗಿದೆ. ಮತಗಳ್ಳತನ ಹಾಗೂ ವಿಶೇಷ ತೀವ್ರ ಪರಿಷ್ಕರಣೆ ವಿರೋಧದ ಹೆಸರಿನಲ್ಲಿ ಚುನಾವಣಾ ವ್‌ಯವಸ್ಥೆಯ ವಿರುದ್ಧ ಕಾಂಗ್ರೆಸ್‌‍ ನಡೆಸುತ್ತಿದ್ದ ಆರೋಪಗಳಿಗೆ ಮತದಾರರು ತಮ್ಮ ತೀರ್ಪಿನ ಮೂಲಕ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇವಿಎಂ ವ್ಯವಸ್ಥೆಯ ಬಗ್ಗೆ ಅನುಮಾನ ವ್‌ಯಕ್ತಪಡಿಸಿ ಬ್ಯಾಲೆಟ್‌ ಮತದಾನಕ್ಕೆ ಒತ್ತಾಯಿಸುತ್ತಿದ್ದ ಕಾಂಗ್ರೆಸ್‌‍ಗೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ನಾಯಕರು ನೈಜ ಪ್ರಜಾಪ್ರಭುತ್ವ ಮತ್ತು ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಒಪ್ಪಿಕೊಂಡು ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ಗೌರವಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ :
ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕೆ.ಎಂ. ಸುರೇಶ್‌, ಎಸ್‌‍.ವಿ.ಸಂಕನೂರು, ಶಶಿಲ್‌ ಜಿ. ನಮೋಶಿ ಹಾಗೂ ಎ.ಪಿ. ರಂಗನಾಥ ಅವರಿಗೆ ವಿಜಯೇಂದ್ರ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಿ ಗೆಲ್ಲಿಸಿದ ಶಿಕ್ಷಕ ಹಾಗೂ ಪದವೀಧರ ಮತದಾರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳಿಗೂ ಧನ್ಯವಾದ ತಿಳಿಸಿದ್ದಾರೆ.

ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ಫಲಿತಾಂಶವನ್ನು ಮಹತ್ವದ ಬೆಳವಣಿಗೆಯಾಗಿ ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ.

RELATED ARTICLES

Latest News