ವಿಶಾಖಪಟ್ಟಣಂ, ಅ.28- ಅರ್ನಬ್ ಚಂಡಿಯ ಆರ್ಭಟಕ್ಕೆ ದಕ್ಷಿಣ ಹಾಗೂ ಪೂರ್ವ ರಾಜ್ಯಗಳು ತತ್ತರಿಸಿ ಹೋಗಿವೆ. ಚಂಡ ಮಾರುತದಿಂದಾಗಿ ಆಂಧ್ರ, ತೆಲಂಗಾಣ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಇದರ ಪರಿಣಾಮ ನೆರೆಯ ರಾಜ್ಯಗಳಾದ ಒಡಿಶಾ, ಉತ್ತರಪ್ರದೇಶಗಳಿಗೂ ತಟ್ಟಿದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಭೀಕರ ಸ್ವರೂಪ ಪಡೆದುಕೊಂಡಿರುವ ಅರ್ನಬ್ ಚಂಡಮಾರುತ ಇಂದು ಮುಂಜಾನೆ ಆಂಧ್ರಪ್ರದೇಶ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ದಕ್ಷಿಣ ಮತ್ತು ಪೂರ್ವ ಭಾರತದ ಕರಾವಳಿ ತೀರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಡಲತೀರಗಳಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಬಂಗಾಳಿ ಭಾಷೆಯಲ್ಲಿ ಸಮುದ್ರ ಎಂಬ ಅರ್ಥವನ್ನು ಹೊಂದಿರುವ ಈ ಅರ್ನಬ್ ಚಂಡಮಾರುತ ಆಂಧ್ರದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಯಾಣಂ ಕರಾವಳಿಯನ್ನು ಪ್ರವೇಶಿಸುತ್ತಿದೆ. ಈ ವೇಳೆ ಗಂಟೆಗೆ 125 ರಿಂದ 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 150 ಕಿ.ಮೀ ವೇಗದವರೆಗೆ ಬೀಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯು ಮುಂದಿನ ಮೂರು ಗಂಟೆಗಳ ಕಾಲ ಮುಂದುವರಿಯಲಿದ್ದು, ಬಳಿಕ ಚಂಡಮಾರುತದ ತೀವ್ರತೆ ಕ್ರಮೇಣ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆಯ ಗಂಟೆಯ ಬುಲೆಟಿನ್ ತಿಳಿಸಿದೆ.
ಚಂಡಮಾರುತ ಅಪ್ಪಳಿಸುತ್ತಿದ್ದಂತೆ ಕಾಕಿನಾಡದಲ್ಲಿ ಹಲವೆಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿಶಾಖಪಟ್ಟಣಂನಲ್ಲಿಯೂ ಬಿರುಗಾಳಿ-ಮಳೆಗೆ ಮರಗಳು ಉರುಳಿಬಿದ್ದು ಬೀಚ್ ರಸ್ತೆ ಹಾಗೂ ಸೀತಮ್ಮಧಾರ ಪ್ರದೇಶಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ವಿಶಾಖಪಟ್ಟಣಂ ಹಾಗೂ ಅನಕಾಪಲ್ಲಿ ಜಿಲ್ಲೆಗಳ ಹಲವೆಡೆ 200 ಮಿ.ಮೀ ಗೂ ಅಧಿಕ ಭಾರೀ ಮಳೆ ದಾಖಲಾಗಿದೆ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲೂ ಭಾರಿ ಮಳೆ ಮತ್ತು ಗಾಳಿ ಮುಂದುವರಿದಿದೆ. ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮುಂದಿನ 4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ದಕ್ಷಿಣ ಹಾಗೂ ಪೂರ್ವದ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕಡಲು ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ ಮತ್ತು ಕರಾವಳಿಯ ಪ್ರವಾಸೋದ್ಯಮ ತಾಣಗಳನ್ನು ಮುಚ್ಚಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕರಾವಳಿ ಭಾಗದ ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಚಾರವನ್ನು ಕಡಿತಗೊಳಿಸಲಾಗಿದೆ.ರೈಲ್ವೆ ಹಾಗೂ ವಿಮಾನಯಾನ ಸೇವೆಗಳ ಮೇಲೆ ಚಂಡಮಾರುತ ತೀವ್ರ ಹೊಡೆತ ನೀಡಿದ್ದು, ಮುನ್ನೆಚ್ಚರಿಕೆಯಾಗಿ 50ಕ್ಕೂ ಹೆಚ್ಚು ರೈಲುಗಳು ಹಾಗೂ 30ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ವಿಮಾನ, ರೈಲು ಸೇವೆ ಬಂದ್; ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಉತ್ತರ ಕರಾವಳಿ ಜಿಲ್ಲೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ.ಅರ್ನಬ್ ಚಂಡಮಾರುತದಿಂದ ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ; ವಿಮಾನ, ರೈಲು ಸೇವೆ ರದ್ದುಗೊಳಿಸಲಾಗಿದೆ.ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಕನಿಷ್ಠ 65 ರೈಲುಗಳು ಮತ್ತು 21 ವಿಮಾನ ಸೇವೆಗಳನ್ನು ರದ್ದುಗೊಳಿಸಲಾಗಿದೆ.
ಚಂಡಮಾರುತವು ಆಂಧ್ರಪ್ರದೇಶಕ್ಕೆ ಪ್ರವೇಶಿಸಿದಂತೆ ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್ಗಢ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಸುಮಾರು 4,000 ಚಂಡಮಾರುತ ಆಶ್ರಯ ತಾಣಗಳನ್ನು ತೆರೆಯಲಾಗಿದ್ದು, ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಆಂಧ್ರಪ್ರದೇಶ, ಪುದುಚೇರಿ ಹಾಗೂ ಓಡಾಶಾದ ಹಲವಾರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅನಕಾಪಲ್ಲಿ ಜಿಲ್ಲೆಯಲ್ಲಿ 3 ದಿನಗಳ ಕಾಲ ರಜೆ ವಿಸ್ತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಅಪಾಯಕಾರಿ ಪ್ರದೇಶಗಳಿಂದ ಈಗಾಗಲೇ 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯ ತಾಣಗಳಿಗೆ ರವಾನಿಸಲಾಗಿದ್ದು, ಒಟ್ಟು 4 ಲಕ್ಷ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.
ಆಂಧ್ರಪ್ರದೇಶ ಮತ್ತು ನೆರೆಯ ಒಡಿಶಾಗಳಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಅಗ್ನಿಶಾಮಕ ದಳದ ನೂರಾರು ತಂಡಗಳು ಸಜ್ಜಾಗಿವೆ. ಆಂಧ್ರದಲ್ಲಿ 2,100ಕ್ಕೂ ಹೆಚ್ಚು ಚಂಡಮಾರುತ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, 1,000ಕ್ಕೂ ಹೆಚ್ಚು ವೈದ್ಯಕೀಯ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಗಂಟೆಗೆ 125 ರಿಂದ 135 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿಯು ಹಲವೆಡೆ ಗರಿಷ್ಠ 150 ಕಿಲೋಮೀಟರ್ ವೇಗವನ್ನು ತಲುಪಿದೆ. ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶ ಕರಾವಳಿ ಮಾತ್ರವಲ್ಲದೆ ಪಕ್ಕದ ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕರಾವಳಿ ಭಾಗಗಳಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಭೂಕುಸಿತ ಪ್ರಕ್ರಿಯೆಯು ಮುಂದಿನ ಮೂರು ಗಂಟೆಗಳ ಕಾಲ ಮುಂದುವರಿಯಲಿದ್ದು, ಚಂಡಮಾರುತವು ನಿಧಾನವಾಗಿ ವಾಯುವ್ಯ ದಿಕ್ಕಿನಿಂದ ಉತ್ತರ-ವಾಯುವ್ಯಕ್ಕೆ ಸಾಗಿ ತೆಲಂಗಾಣದತ್ತ ಚಲಿಸುವ ವೇಳೆ ಕ್ರಮೇಣ ದುರ್ಬಲಗೊಳ್ಳಲಿದೆ.ಕಾಕಿನಾಡ, ಕೋನಸೀಮಾ, ಅನಕಾಪಲ್ಲಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ನೂರಾರು ಮರಗಳು ಹಾಗೂ ಸಾವಿರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಷ್ಟ್ರೀಯ ಹೆದ್ದಾರಿ 216 ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮರಗಳು ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಇಂದು ನಸುಕಿನ ಜಾವದವರೆಗೆ ವಿಶಾಖಪಟ್ಟಣದಲ್ಲಿ ಬರೋಬ್ಬರಿ 216.9 ಮಿ.ಮೀ ಮಳೆಯಾಗಿದೆ.ಕರಾವಳಿಯಲ್ಲಿ 1.5 ರಿಂದ 2.5 ಮೀಟರ್ ಎತ್ತರದ ಬೃಹತ್ ಅಲೆಗಳು ಏಳುತ್ತಿದ್ದು, ಯಾನಂ ಸಮೀಪದ ಸವತ್ರಿ ನಗರದಲ್ಲಿ ಸಮುದ್ರದ ನೀರು ನುಗ್ಗಿ ಪರಿಹಾರ ಕೇಂದ್ರಗಳಿಗೂ ಹಾನಿಯಾಗಿದೆ. ಒಡಿಶಾದ ಗಜಪತಿ, ಗಂಜಾಂ, ರಾಯಗಡ, ಕೊರಾಪುಟ್, ನಬರಂಗ್ಪುರ ಮತ್ತು ಮಲ್ಕಂಗಿರಿ ಜಿಲ್ಲೆಗಳಿಗೆ ತೀವ್ರ ಮಳೆಯ ಎಚ್ಚರಿಕೆ ನೀಡಲಾಗಿದೆ. ಇಲ್ಲಿ ಗಂಟೆಗೆ 60 ರಿಂದ 90 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಪ್ರಾಣಹಾನಿ ಇಲ್ಲ; ಚಂಡಮಾರುತದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಆಡಳಿತ ಯಂತ್ರವು ಕೈಗೊಂಡ ಮುಂಜಾಗ್ರತಾ ಕ್ರಮಗಳೇ ಪ್ರಾಣಹಾನಿಯನ್ನು ತಡೆಯಲು ಕಾರಣ ಎಂದು ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಸೇರಿದಂತೆ 32,000 ಸಿಬ್ಬಂದಿಯೊಂದಿಗೆ ನಡೆಸಿದ ಟೆಲಿ ಕಾನ್ಫರೆನ್್ಸನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಆಸ್ತಿಪಾಸ್ತಿ ಹಾನಿಯನ್ನು ಕನಿಷ್ಠಗೊಳಿಸಲು ಮತ್ತು ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಆದಷ್ಟು ಬೇಗ ಸಹಜ ಸ್ಥಿತಿಯನ್ನು ಮರಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಿದ್ದ ಮರಗಳಿಂದ ತಡೆಯುಂಟಾಗಿರುವ ರಸ್ತೆಗಳನ್ನು ಎರಡು ಗಂಟೆಗಳ ಒಳಗೆ ತೆರವುಗೊಳಿಸುವಂತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಗೆ ಅಡ್ಡಿಯಾಗಿರುವ ಮರಗಳನ್ನು ತಕ್ಷಣವೇ ತೆಗೆದುಹಾಕುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಬಲವಾದ ಗಾಳಿಯ ವೇಗ ತಗ್ಗಿದ ನಂತರ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸುವಂತೆ ಅವರು ನಿರ್ದೇಶಿಸಿದರು.
ಚಂಡಮಾರುತ ಪರಿಹಾರ ಕೇಂದ್ರಗಳಲ್ಲಿ ಸಾಕಷ್ಟು ಆಹಾರ, ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಅಗತ್ಯವನ್ನು ನಾಯ್ಡು ಒತ್ತಿ ಹೇಳಿದರು. ಕೃಷಿ ಜಮೀನುಗಳಿಗೆ ನೀರು ನುಗ್ಗದಂತೆ ತಡೆಯಲು, ತೋಟಗಾರಿಕಾ ಬೆಳೆಗಳನ್ನು ರಕ್ಷಿಸಲು ಹಾಗೂ ಕೆರೆಗಳು ಮತ್ತು ಕಾಲುವೆಗಳಲ್ಲಿ ಒಡೆತ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ಹಾನಿಯ ಪ್ರಾಥಮಿಕ ಅಂದಾಜನ್ನು ಸಿದ್ಧಪಡಿಸುವಂತೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಿಳಿಸಿದರು. ಇದಲ್ಲದೆ, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಮನಮಿತ್ರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮತ್ತು ದೂರುದಾರರಿಗೆ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
