ಶೆಂಡಿ, ಅ. 28: ಸುಡಾನ್ನ ನೈಋತ್ಯ ಭಾಗದಲ್ಲಿರುವ ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿ ನಿಯಾಲಾದ ಜನನಿಬಿಡ ಮಾರುಕಟ್ಟೆ ಮೇಲೆ ಸುಡಾನ್ ಸೇನೆ ನಡೆಸಿದ ಡ್ರೋನ್ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 113 ಜನರು ಗಾಯಗೊಂಡಿದ್ದಾರೆ.
ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳು ಎಂದು ಸಂಘಟನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯನ್ನು ಖಂಡಿಸಿರುವ ಮಾನವ ಹಕ್ಕು ಸಂಘಟನೆಯು, ಘಟನೆಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಈ ಹತ್ಯಾಕಾಂಡದಿಂದ ಜನಸಾಮಾನ್ಯರು ವ್ಯಾಪಾರ ಮಾಡುತ್ತಿದ್ದ ಮಾರುಕಟ್ಟೆಯು ಸಾಮೂಹಿಕ ಸಾವು ಮತ್ತು ಗಾಯಗಳ ತಾಣವಾಗಿ ಮಾರ್ಪಟ್ಟಿದೆ. ಇದು ಸ್ಥಳೀಯ ನಿವಾಸಿಗಳ ಜೀವಕ್ಕೆ ಅಪಾಯ ತಂದಿದ್ದು, ಈಗಾಗಲೇ ನಡೆಯುತ್ತಿರುವ ಯುದ್ಧದಿಂದ ಅವರು ಅನುಭವಿಸುತ್ತಿರುವ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಸಂಘಟನೆ ಹೇಳಿದೆ.
ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಯೂ ನಿಯಾಲಾದ ತನ್ನ ಆಸ್ಪತ್ರೆಗೆ 36 ಮೃತದೇಹಗಳು ಬಂದಿವೆ ಹಾಗೂ ತುರ್ತು ಚಿಕಿತ್ಸಾವಿಭಾಗದಲ್ಲಿ 150 ಗಾಯಾಳುಗಳನ್ನು ಕಂಡಿರುವುದಾಗಿ ಈ ಹಿಂದೆ ತಿಳಿಸಿತ್ತು. ದಕ್ಷಿಣ ದಾರ್ಫರ್ ಪ್ರಾಂತ್ಯದ ರಾಜಧಾನಿ ನಿಯಾಲಾ ಪ್ರಸ್ತುತ ಅರೆಸೇನಾ ಪಡೆ ರ್ಯಾಪಿಡ್ ಸಪೋರ್ಟ್ ಫೋರ್ಸಸ್ ನಿಯಂತ್ರಣದಲ್ಲಿದೆ. 2023ರಿಂದ ಈ ಪಡೆ ಸುಡಾನ್ ಸೇನೆಯೊಂದಿಗೆ ಸಂಘರ್ಷ ನಡೆಸುತ್ತಿದೆ.
ಇತ್ತೀಚಿನ ವಾರಗಳಲ್ಲಿ ಎರಡೂ ಕಡೆಯಿಂದ ಡ್ರೋನ್ ದಾಳಿಗಳು ತೀವ್ರಗೊಂಡಿದ್ದು, ನೂರಾರು ಮಂದಿ ಮೃತಪಟ್ಟಿದ್ದಾರೆ. ಸ್ಫೋಟಕಗಳನ್ನು ಹೊತ್ತ ಡ್ರೋನ್ಗಳ ಮೂಲಕ ಆಸ್ಪತ್ರೆಗಳು, ಅಣೆಕಟ್ಟುಗಳು, ಶಾಲೆಗಳು, ಮಾರುಕಟ್ಟೆಗಳು ಮತ್ತು ನಿರಾಶ್ರಿತರ ಶಿಬಿರಗಳಂತಹ ನಾಗರಿಕ ಮೂಲಸೌಕರ್ಯಗಳ ಮೇಲೆಯೂ ದಾಳಿ ನಡೆಸಲಾಗಿದೆ. ಈ ಸಂಘರ್ಷದಲ್ಲಿ ನಾಗರಿಕರಿಗೆ ಡ್ರೋನ್ ದಾಳಿಗಳೇ ಅತ್ಯಂತ ಮಾರಕ ಅಪಾಯವಾಗಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
