ಬೆಂಗಳೂರು,ಏ.10- ಸಮಾಜಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟಿರುವ ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಒಕ್ಕಲಿಗ ಮುಖ್ಯಮಂತ್ರಿಯನ್ನು ಬಿಜೆಪಿಯವರೇ ತೆಗೆದಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ಕೊಟ್ಟ ಅವರು, ಆದಿಚುಂಚನಗಿರಿ ಮಠ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಎಲ್ಲರಿಗೂ ಸೇರಿದ್ದು. ಶ್ರೀಗಳನ್ನು ರಾಜಕೀಯಕ್ಕೆ ಎಳೆದು ತರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ತಮ್ಮ ಜೀವನವನ್ನೇ ಶ್ರೀಗಳು ಸಮಾಜ ಕಲ್ಯಾಣಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಅವರಿಗೆ ಎಲ್ಲರೂ ಒಂದೇ. ಶ್ರೀಮಠ ದಲ್ಲಿ ಎಂದೂ ರಾಜಕೀಯ ಚಟುವಟಿಕೆಗಳು ನಡೆದ ನಿದರ್ಶನಗಳಿಲ್ಲ. ಅನಗತ್ಯವಾಗಿ ಶಿವಕುಮಾರ್ ಶ್ರೀಗಳನ್ನು ಎಳೆದುತರುತ್ತಿದ್ದಾರೆ. ಅವರ ಹಿರಿತನಕ್ಕೆ ಇದು ಒಳ್ಳೆಯದಲ್ಲ ಎಂದು ಆಕ್ಷೇಪಿಸಿದರು.
ಇವರು ಹೋದರೆ ಎಲ್ಲವೂ ಸರಿಯಿರುತ್ತದೆ. ಬೇರೆಯವರು ಹೋದರೆ ಏಕೆ ಹೊಟ್ಟೆ ಹುರಿದುಕೊಳ್ಳಬೇಕು. ಅಷ್ಟಕ್ಕೂ ಆದಿ ಚುಂಚನಗಿರಿ ಮಠವನ್ನು ಇಲ್ಲವೇ ಡಾ.ನಿರ್ಮಲಾನಂದ ಶ್ರೀಗಳು ಯಾವುದೇ ರಾಜಕೀಯ ಪಕ್ಷದ ಸ್ವತ್ತಲ್ಲ. ರಾಜಕೀಯದಲ್ಲಿ ಸಾಕಷ್ಟು ಅನುಭವವಿರುವ ಶಿವಕುಮಾರ್ರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಶೋಕ್ ಆಕ್ಷೇಪಿಸಿದರು.
ಕಾಂಗ್ರೆಸ್ ಇತ್ತೀಚಗೆ ಎಲ್ಲದರಲ್ಲೂ ಹುಳುಕು ಹುಡುಕುವ ಪ್ರಯತ್ನ ಮಾಡುತ್ತದೆ. ತಾವು ಏನೇ ಮಾಡಿದರೂ ಸರಿ. ಬೇರೆಯವರು ಮಾಡಿದರೆ ತಪ್ಪು ಎಂಬ ಭ್ರಮೆಯಲ್ಲಿದ್ದಾರೆ. ಆದಿ ಚುಂಚನಗಿರಿ ಮಠಕ್ಕೆ ಹೋಗಲು ನಾವು ಶಿವಕುಮಾರ್ ಅಥವಾ ಕಾಂಗ್ರೆಸ್ ನಾಯಕರ ಒಪ್ಪಿಗೆ ಪಡೆಯಬೇಕಿಲ್ಲ ಎಂದು ಕೆಂಡ ಕಾರಿದರು.
ಚುನಾವಣೆಯಲ್ಲಿ ಗೆದ್ದೇಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಗ್ಯಾರಂಟಿಗಳಿಗೆ ಮತದಾರ ತಕ್ಕ ಪಾಠ ಕಲಿಸಲು ಸಿದ್ಧನಾಗಿದ್ದಾನೆ. ಜೂನ್ 4 ರ ಫಲಿತಾಂಶದವರೆಗೆ ಸಹನೆಯಿಂದ ಕಾಯಿರಿ. ಫಲಿತಾಂಶ ಬಂದಾಗ ಅಸಲಿ ಮುಖವಾಡ ಕಳಚಿ ಬೀಳಲಿದೆ ಎಂದು ಅಶೋಕ್ ಎಚ್ಚರಿಸಿದರು.
ಕೇಂದ್ರ ಸರ್ಕಾರ 2 ಸಾವಿರ ಕೋಟಿ ಎಸ್ ಡಿ ಆರ್ ಎಫ್ ಹಣವನ್ನು ಎರಡು ಕಂತಲ್ಲಿ ಬಿಡುಗಡೆ ಮಾಡಿದೆ. ಕೇರಳ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರ ಹಣ ಇಲ್ಲದೆ ಪಾರ್ಪಾ ಆಗಿದೆ, ಅದನ್ನ ಮುಚ್ಚಿಟ್ಟುಕೊಂಡಿದೆ. ಕೇಂದ್ರ ಕೊಟ್ಟ ಹಣವನ್ನ ಇವರು ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯದ ಆರ್ಥಿಕತೆಯ ಶ್ವೇತ ಪತ್ರ ಬಿಡುಗಡೆ ಮಾಡಲು, ತಾಕತ್ತಿದ್ರೆ ಬಿಡುಗಡೆ ಮಾಡಲಿ. ಜನಕ್ಕೆ ಗೊತ್ತಾದ್ರೆ ಮಾನ ಮರ್ಯಾದೆ ಹೋಗುತ್ತದೆ. ಡೂಪ್ಲೀಕೇಟ್ ಸಿದ್ದರಾಮಯ್ಯ ಇವರು. ಕೇಂದ್ರದ ಅಕ್ಕಿಯನ್ನು ನನ್ನ ಅನ್ನ ಭಾಗ್ಯ ಅಂತಾರೆ ಸಿದ್ಧರಾಮಯ್ಯ. ಇದು ನರೆಂದ್ರ ಮೋದಿ ಭಾಗ್ಯ ಎಂದು ಪ್ರಶಂಸಿದರು.
ಇವರ ಯೋಗ್ಯತೆಗೆ 50 ವರ್ಷದಲ್ಲಿ ಏನು ಮಾಡಿದ್ದೀರಿ. ಗರಭೀ ಹಠಾವೋ ಅಂತಿರಿ. ಮೋದಿ ಬಂದ ಬಳಿಕ 25 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಮನಮೋಹನ್ ಸಿಂಗ್ಗಿಂತ 240 ಪಟ್ಟು ಹೆಚ್ಚು ಹಣವನ್ನ ಮೋದಿ ಸರ್ಕಾರ ಕೊಟ್ಟಿದೆ. ಇವರು ಕೇವಲ ಡ್ರಾಮ ಕಂಪನಿ. ದಾಖಲೆಯಲ್ಲೇ ಇದೆ ಸಿದ್ದರಾಮಯ್ಯ ಕಾಲಿಟ್ಟಮೇಲೆ ಬರಗಾಲ. ಇಂತಹ ಬರಗಾಲ ತರುವ ಕಾಂಗ್ರೆಸ್ ಬೇಕಾ ಬೇಡ್ವಾ ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.