ಬೆಂಗಳೂರು,ಏ.11- ಇದೇ 26 ರಂದು ನಡೆಯಲಿರುವ ಮತದಾನದ ಹಬ್ಬವನ್ನು ಎಲ್ಲರೂ ಸೇರಿ ಒಟ್ಟಾಗಿ ಆಚರಿಸೋಣ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಇಂದಿಲ್ಲಿ ಕರೆ ನೀಡಿದರು.
ಲೋಕಸಭಾ ಚುನಾವಣೆಯ ಅಂಗವಾಗಿ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ವಿಧಾನಸೌಧದ ಮುಂಭಾಗ ಇಂದು ಹಮ್ಮಿಕೊಂಡಿರುವ ಮತದಾನ ಜಾಗೃತಿಯ ಸೈಕಲ್ ಜಾಥಾ(ಸೈಕ್ಲೋಥಾನ್)ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಣಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ದಕ್ಷಿಣ ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಹಾಗೂ ಉತ್ತರ ಕರ್ನಾಟಕದಲ್ಲಿ ಮೇ 7 ರಂದು ಮತದಾನ ನಡೆಯುತ್ತಿದೆ. ಮತ ಚಲಾಯಿಸಲು ಅರ್ಹರಿರುವ ಎಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಅವರು ಮನವಿ ಮಾಡಿಕೊಂಡರು.
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಗೂ ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಸೈಕ್ಲಥಾನ್ ವಿಧಾನ ಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಿಂದ, ಕೆ.ಆರ್ ವೃತ್ತದ ನೃಪತುಂಗ ರಸ್ತೆಯ ಮೂಲಕ ಸಾಗಿ, ಹಡ್ಸನ್ ವೃತ್ತ, ಕಸ್ತೂರ್ ಬಾ ರಸ್ತೆ, ಕ್ವೀನ್ಸ್ ರಸ್ತೆ(ಚಿನ್ನಸ್ವಾಮಿ ಕ್ರೀಡಾಂಗಣ)ಯಿಂದ, ಡಾ. ಬಿ.ಆರ್ ಅಂಬೇಡ್ಕರ್ ರಸ್ತೆಯ ಮೂಲಕ ವಿಧಾನಸೌಧ ಪೂರ್ವ ದ್ವಾರದ ಬಳಿ ಸೈಕ್ಲೋಥಾನ್ ಮುಕ್ತಾಯಗೊಂಡಿತು.
ಈ ವೇಳೆ ಜಿಲ್ಲಾ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ಚುನಾವಣಾ ರಾಯಭಾರಿಗಳಾದ ಅನುಪ್ ಶ್ರೀಧರ್, ನೀತು ವನಜಾಕ್ಷಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ನಾಗರೀಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.