ನವದೆಹಲಿ, ನ.1- ಭಾರತದಲ್ಲಿ ಕಳೆದೊಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ತೀವ್ರ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, 2011ರಿಂದ 2023ರ ನಡುವೆ ಸುಮಾರು 49.6 ಕೋಟಿ ಜನರು ಬಡತನದ ರೇಖೆಯಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ. ಈ ಐತಿಹಾಸಿಕ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಬಡತನ ನಿರ್ಮೂಲನೆ ತಮ್ಮ ಸರ್ಕಾರದ ಪಾಲಿಗೆ ಕೇವಲ ರಾಜಕೀಯ ಘೋಷಣೆಯಾಗಿರದೆ, ಅದೊಂದು ದೃಢವಾದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
ವಿಶ್ವಬ್ಯಾಂಕ್ ಪ್ರಕಟಿಸಿರುವ ‘ಇಂಡಿಯಾ ಪಾವರ್ಟಿ ಅಂಡ್ ಇಕ್ವಿಟಿ ಬ್ರೀಫ್: ಅಕ್ಟೋಬರ್ 2026’ ವರದಿಯನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬಡತನವನ್ನು ಕಡಿಮೆ ಮಾಡುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬಾಲಿವುಡ್ನ ‘ದಸ್ವಿ’ ಚಲನಚಿತ್ರದ ‘ಥಾನ್ ಲಿಯಾ’ ಹಾಡನ್ನು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿರುವ ಮೋದಿ, ದೇಶದಲ್ಲಿ ಬಡತನದ ಪ್ರಮಾಣದಲ್ಲಾಗಿರುವ ಇಳಿಕೆಯು ಕೇವಲ ಅಂಕಿ-ಅಂಶಗಳ ಬದಲಾವಣೆಯಲ್ಲ. ಇದು ಜನರ ಜೀವನಮಟ್ಟ, ಅವಕಾಶಗಳು ಮತ್ತು ಭವಿಷ್ಯದ ಆಶಯಗಳಲ್ಲಿ ಉಂಟಾಗಿರುವ ಪೀಳಿಗೆಯ ಬದಲಾವಣೆಯ ಸಂಕೇತವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಉದ್ಯೋಗ ಸೃಷ್ಟಿಯ ವಿಚಾರವನ್ನೂ ಪ್ರಸ್ತಾಪಿಸಿರುವ ಪ್ರಧಾನಿ, ಕೇವಲ ಆರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಉದ್ಯೋಗಾವಕಾಶಗಳು 13.4 ಕೋಟಿಯಷ್ಟು ಹೆಚ್ಚಾಗಿವೆ. ಇದು ಇದೇ ಅವಧಿಯಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಾದ ಹೆಚ್ಚಳಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಆದಾಯದ ಹಂಚಿಕೆಯಲ್ಲಿನ ಅಸಮಾನತೆಯನ್ನು ಅಳೆಯುವ ಜಿನಿ ಸೂಚ್ಯಂಕದಲ್ಲೂ ಸುಧಾರಣೆ ಕಂಡುಬಂದಿದೆ. ಈ ಸೂಚ್ಯಂಕ ಶೇ.20ಕ್ಕಿಂತ ಹೆಚ್ಚು ಇಳಿಕೆಯಾಗಿ ಶೇ.23ಕ್ಕೆ ತಲುಪಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ. ಇದು ದೇಶದಲ್ಲಿ ಆರ್ಥಿಕ ಅಸಮಾನತೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ ಎಂಬುದು ಅವರ ಅಭಿಪ್ರಾಯ.
ಕಾಂಗ್ರೆಸ್ ಪಕ್ಷದ ಹಿಂದಿನ ‘ಗರೀಬಿ ಹಟಾವೋ’ ಘೋಷಣೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಟೀಕಿಸಿರುವ ಪ್ರಧಾನಿ ಮೋದಿ, ಬಡತನ ನಿರ್ಮೂಲನೆ ಎಂಬುದು ತಮ್ಮ ಸರ್ಕಾರಕ್ಕೆ ಕೇವಲ ಘೋಷಣೆಯ ವಿಷಯವಲ್ಲ, ಜನರ ಬದುಕಿನಲ್ಲಿ ಬದಲಾವಣೆ ತರುವ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು, ಉದ್ಯೋಗಾವಕಾಶಗಳ ವಿಸ್ತರಣೆ ಹಾಗೂ ಆರ್ಥಿಕ ಅಭಿವೃದ್ಧಿಯ ಪ್ರಯತ್ನಗಳು ಬಡತನ ಕಡಿತಕ್ಕೆ ಪೂರಕವಾಗಿವೆ ಎಂಬ ಸಂದೇಶವನ್ನು ಪ್ರಧಾನಿ ತಮ್ಮ ಪೋಸ್ಟ್ ಮೂಲಕ ನೀಡಿದ್ದಾರೆ.
ಬಡತನದ ಪ್ರಮಾಣದಲ್ಲಿ ಭಾರಿ ಇಳಿಕೆ
ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದಲ್ಲಿ ಕಡುಬಡತನದ ಪ್ರಮಾಣ 2011ರಲ್ಲಿ ಶೇ.27.1ರಷ್ಟಿತ್ತು. 2023ರ ವೇಳೆಗೆ ಅದು ಶೇ.2.6ಕ್ಕೆ ಇಳಿದಿದೆ. ಅಂದರೆ, ತೀವ್ರ ಬಡತನದ ಪ್ರಮಾಣದಲ್ಲಿ ಸುಮಾರು ಶೇ.90ರಷ್ಟು ಕುಸಿತ ದಾಖಲಾಗಿದೆ.
ಒಂದು ಕಾಲದಲ್ಲಿ ಪ್ರತಿ ನಾಲ್ವರು ಭಾರತೀಯರಲ್ಲಿ ಒಬ್ಬರು ಕಡುಬಡತನದ ಪರಿಸ್ಥಿತಿಯಲ್ಲಿದ್ದರೆ, ಈಗ ಸುಮಾರು 38 ಮಂದಿಯಲ್ಲಿ ಒಬ್ಬರು ಮಾತ್ರ ಈ ವರ್ಗದಲ್ಲಿ ಉಳಿದಿದ್ದಾರೆ ಎಂಬುದು ವರದಿಯ ಪ್ರಮುಖ ಅಂಶವಾಗಿದೆ. 2011ರಿಂದ 2023ರ ನಡುವಿನ ಅವಧಿಯಲ್ಲಿ 49.6 ಕೋಟಿ ಜನರು ಬಡತನದಿಂದ ಹೊರಬಂದಿರುವುದು ಭಾರತದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಶ್ವಬ್ಯಾಂಕ್ ವರದಿಯಲ್ಲಿ 2021ರ ಖರೀದಿ ಶಕ್ತಿ ಸಮಾನತೆ (ಪರ್ಚೇಸಿಂಗ್ ಪವರ್ ಪ್ಯಾರಿಟಿ-ಪಿಪಿಪಿ) ಆಧಾರದಲ್ಲಿ ಬಡತನದ ಪ್ರಮಾಣವನ್ನು ಲೆಕ್ಕಹಾಕಲಾಗಿದೆ. ದಿನಕ್ಕೆ 3 ಅಮೆರಿಕನ್ ಡಾಲರ್ ಆದಾಯವನ್ನು ತೀವ್ರ ಬಡತನದ ರೇಖೆಯಾಗಿ ಹಾಗೂ 4.20 ಡಾಲರ್ ಅನ್ನು ಕೆಳ-ಮಧ್ಯಮ ಆದಾಯದ ದೇಶಗಳ ಬಡತನದ ಮಾನದಂಡವಾಗಿ ಪರಿಗಣಿಸಲಾಗಿದೆ. ಕಳೆದ ದಶಕದಲ್ಲಿ ಭಾರತವು ಆರ್ಥಿಕ ಹಾಗೂ ಆರ್ಥಿಕೇತರ ಮಾನದಂಡಗಳೆರಡರಲ್ಲೂ ಬಡತನ ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ವರದಿ ತಿಳಿಸಿದೆ.
ಒಟ್ಟಿನಲ್ಲಿ, ವಿಶ್ವಬ್ಯಾಂಕ್ ವರದಿಯ ಅಂಕಿ-ಅಂಶಗಳು ದೇಶದ ಬಡತನ ನಿವಾರಣೆಯ ಪ್ರಗತಿಯನ್ನು ಪ್ರತಿಬಿಂಬಿಸುತ್ತಿದ್ದರೂ, ಬಡತನದ ಸಂಪೂರ್ಣ ನಿರ್ಮೂಲನೆ, ಉದ್ಯೋಗಗಳ ಗುಣಮಟ್ಟ, ಆದಾಯದ ಸ್ಥಿರತೆ ಮತ್ತು ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಅಂತರ ಕಡಿಮೆ ಮಾಡುವ ಸವಾಲುಗಳು ಇನ್ನೂ ಮುಂದುವರಿದಿವೆ. ಹೀಗಾಗಿ, ಬಡತನದ ಪ್ರಮಾಣದಲ್ಲಿನ ಇಳಿಕೆಯ ಜೊತೆಗೆ ಜನರ ಜೀವನಮಟ್ಟದಲ್ಲಿ ಆಗುತ್ತಿರುವ ನೈಜ ಬದಲಾವಣೆಯೂ ಮುಂದಿನ ದಿನಗಳಲ್ಲಿ ಮಹತ್ವದ ಮಾನದಂಡವಾಗಲಿದೆ.
