Homeರಾಷ್ಟ್ರೀಯಸಿಜೆಐ ವಿರುದ್ಧ ಪೋಸ್ಟ್‌ ಪ್ರಕರಣ: ಕೇರಳ ಕಾಂಗ್ರೆಸ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲು

ಸಿಜೆಐ ವಿರುದ್ಧ ಪೋಸ್ಟ್‌ ಪ್ರಕರಣ: ಕೇರಳ ಕಾಂಗ್ರೆಸ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲು

ನವದೆಹಲಿ, ನ.1- ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ದಾಖಲಿಸಿಕೊಂಡಿದೆ.

ಸುಪ್ರೀಂಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ವಕೀಲ ವಿನೀತ್ ಜಿಂದಾಲ್ ಅವರು ಅಕ್ಟೋಬರ್ 13ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದ ದೂರನ್ನು ಅಕ್ಟೋಬರ್ 30ರಂದು ರಿಟ್ ಅರ್ಜಿಯಾಗಿ ನೋಂದಾಯಿಸಲಾಗಿದೆ. ಕಳೆದ ಅಕ್ಟೋಬರ್ 12ರ ಸಂಜೆ ಸುಪ್ರೀಂಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಇತರ ರಾಜಕೀಯ ನಾಯಕರು ಭಾಗವಹಿಸಿದ್ದ ಪ್ರತಿಭಟನೆ ಹಾಗೂ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿಯೂ ದೂರಿನಲ್ಲಿ ತನಿಖೆಗೆ ಮನವಿ ಮಾಡಲಾಗಿದೆ.

ಈ ಪ್ರತಿಭಟನೆಗೆ ಅನುಮತಿ ನೀಡಲಾಗಿತ್ತೇ ಅಥವಾ ವಕೀಲರು, ದಾವೆದಾರರು, ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಯ ಸಂಚಾರಕ್ಕೆ ಅಡ್ಡಿಯುಂಟು ಮಾಡಲಾಗಿತ್ತೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ಕಾಂಗ್ರೆಸ್ ಕೇರಳಂನ ಅಧಿಕೃತ ಎಕ್ಸ್ ಖಾತೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಗುರಿಯಾಗಿಸಿಕೊಂಡು ಪ್ರಕಟಿಸಲಾಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಸ್ಟ್ ಅನ್ನು ಅಳಿಸಲಾಗಿತ್ತು. ಬಳಿಕ ಆ ಪೋಸ್ಟ್ ಪ್ರಕಟಣೆಗೆ ಹೊಣೆಗಾರರಾಗಿದ್ದ ವ್ಯಕ್ತಿಯನ್ನು ಪಕ್ಷದ ಜವಾಬ್ದಾರಿಯಿಂದ ತೆಗೆದುಹಾಕಲಾಗಿತ್ತು.

ಕೆಪಿಸಿಸಿ ನಾಯಕತ್ವದ ಗಮನಕ್ಕೆ ತಾರದೆ, ಅವರ ಒಪ್ಪಿಗೆ ಅಥವಾ ಸಮಾಲೋಚನೆಯಿಲ್ಲದೆ ಈ ಪೋಸ್ಟ್ ಪ್ರಕಟಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಸ್ಪಷ್ಟಪಡಿಸಿದ್ದರು. ನ್ಯಾಯಾಂಗದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದೂ ಸನ್ನಿ ಜೋಸೆಫ್ ಹೇಳಿದ್ದರು.

RELATED ARTICLES

Latest News