Homeರಾಷ್ಟ್ರೀಯಹೈದರಾಬಾದ್‌ನಲ್ಲಿ ಅಕ್ರಮ ಅಂಡಾಣು ದಾನ ಜಾಲ ಪತ್ತೆ : 43 ಮಹಿಳೆಯರನ್ನು ರಕ್ಷಣೆ

ಹೈದರಾಬಾದ್‌ನಲ್ಲಿ ಅಕ್ರಮ ಅಂಡಾಣು ದಾನ ಜಾಲ ಪತ್ತೆ : 43 ಮಹಿಳೆಯರನ್ನು ರಕ್ಷಣೆ

ಹೈದರಾಬಾದ್‌, ನ.1- ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ವಾಣಿಜ್ಯ ಚಟುವಟಿಕೆಗೆ ಬಳಸಿಕೊಂಡು ನಡೆಸಲಾಗುತ್ತಿದ್ದ ಅಂತರರಾಜ್ಯ ಮಟ್ಟದ ಅಂಡಾಣು ದಾನ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಪತ್ತೆಹಚ್ಚಿದ್ದಾರೆ.

ಕಾರ್ಯಾಚರಣೆಯಲ್ಲಿ 43 ಮಹಿಳೆಯರನ್ನು ರಕ್ಷಿಸಲಾಗಿದ್ದು, ದಂಧೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಂಟು ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣವು ಫಲವತ್ತತೆ ಚಿಕಿತ್ಸೆ, ಐವಿಎಫ್ ಕೇಂದ್ರಗಳು ಹಾಗೂ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ಬ್ಯಾಂಕ್‌ಗಳ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಹೈದರಾಬಾದ್‌ಗೆ ಕರೆತಂದು ಅಂಡಾಣು ದಾನ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೇಗಂಪೇಟೆ ಮತ್ತು ಸರೂರನಗರ ಪೊಲೀಸರು, ಮಲ್ಕಾಜ್‌ಗಿರಿ ಕಮಿಷನರೇಟ್‌ನ ವಿಶೇಷ ಕಾರ್ಯಾಚರಣೆ ತಂಡದ ಸಹಯೋಗದಲ್ಲಿ ನಗರದ ಐದು ಪ್ರಮುಖ ಪ್ರದೇಶಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಈ ಜಾಲವನ್ನು ಬಯಲಿಗೆಳೆದಿದ್ದಾರೆ.

ಪ್ರತಿ ಬಾರಿ ಅಂಡಾಣು ದಾನಕ್ಕೆ 20ರಿಂದ 30 ಸಾವಿರ ರೂ. ಆಮಿಷ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯರಿಗೆ ಪ್ರತಿ ಬಾರಿ ಅಂಡಾಣು ದಾನ ಮಾಡಿದರೆ 20 ಸಾವಿರದಿಂದ 30 ಸಾವಿರ ರೂಪಾಯಿ ನೀಡುವುದಾಗಿ ಆಮಿಷವೊಡ್ಡಲಾಗುತ್ತಿತ್ತು. ವಿವಿಧ ರಾಜ್ಯಗಳಲ್ಲಿ ಏಜೆಂಟರನ್ನು ನೇಮಿಸಿಕೊಂಡಿದ್ದ ಆರೋಪಿಗಳು, ಮಹಿಳೆಯರಿಗೆ ಪ್ರಯಾಣದ ವ್ಯವಸ್ಥೆ ಮಾಡಿ ಹೈದರಾಬಾದ್‌ಗೆ ಕರೆತರುತ್ತಿದ್ದರು. ಬಳಿಕ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಕಲ್ಪಿಸಿ, ಫಲವತ್ತತೆ ಚಿಕಿತ್ಸೆ ನೀಡುವ ಕೇಂದ್ರಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿದ್ದರು ಎನ್ನಲಾಗಿದೆ.

ಕೆಲವು ಮಹಿಳೆಯರು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಅಂಡಾಣು ದಾನ ಪ್ರಕ್ರಿಯೆಗೆ ಸಿದ್ಧಪಡಿಸುವ ಉದ್ದೇಶದಿಂದ ಅವರಿಗೆ ಹಾರ್ಮೋನ್ ಇಂಜೆಕ್ಷನ್‌ಗಳನ್ನು ನೀಡಲಾಗಿತ್ತು. ಮಾತ್ರೆಗಳನ್ನು ಸೇವಿಸುವಂತೆಯೂ ಸೂಚಿಸಲಾಗಿತ್ತು ಎಂದು ತಿಳಿದುಬಂದಿದೆ.

ಅಂಡಾಣು ದಾನ ಪ್ರಕ್ರಿಯೆಯು ವೈದ್ಯಕೀಯ ಮೇಲ್ವಿಚಾರಣೆ ಮತ್ತು ಸೂಕ್ತ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರಬೇಕಾಗಿರುವುದರಿಂದ, ಈ ಮಹಿಳೆಯರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವೈದ್ಯಕೀಯ ಇಂಜೆಕ್ಷನ್‌ಗಳು, ಮಾತ್ರೆಗಳು ವಶಕ್ಕೆ

ದಾಳಿ ವೇಳೆ ಪೊಲೀಸರು ಹ್ಯೂಮಾಗ್ ಎಚ್‌ಪಿ 150 ಐಯು ಇಂಜೆಕ್ಷನ್‌ಗಳ ಐದು ಸೀಸೆಗಳು, ಸಿರಿಂಜ್‌ಗಳು, ಎರಡು ಸೂಜಿಗಳು, ಪ್ರಿಮೊಲುಟ್ ಮತ್ತು ಮೆಪ್ರೇಟ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಹಲವು ದಾಖಲೆಗಳು, ಮೊಬೈಲ್ ಫೋನ್‌ಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಧಿಕೃತ ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಕೆಲವು ವೈದ್ಯಕೀಯ ಪ್ರಕ್ರಿಯೆಗಳನ್ನು ನಡೆಸಿರುವ ಸಾಧ್ಯತೆ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ನಿಯಮಗಳ ಉಲ್ಲಂಘನೆಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ದಂಧೆಯ ಪ್ರಮುಖ ಆರೋಪಿಗಳು ಯಾರು?

ಬಂಧಿತರಲ್ಲಿ ಅಮಿತ್ ಶರ್ಮಾ (44) ಈ ಜಾಲದ ಪ್ರಮುಖ ಸಂಘಟಕ ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಯರನ್ನು ವಿವಿಧ ರಾಜ್ಯಗಳಿಂದ ನೇಮಿಸಿಕೊಳ್ಳುವಲ್ಲಿ ನಿಕ್ಕತ್ ಪರ್ವೀನ್ (31) ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

  • ರೇಷಾ ಖಾತೂನ್ (26) – ಐವಿಎಫ್ ಏಜೆಂಟ್ ಮತ್ತು ಉಪ ಏಜೆಂಟ್.
  • ಮೇಘಾವತ್ ಶ್ರೀನಿವಾಸ್ ಅಲಿಯಾಸ್ ಸೋನು (23) – ವೈದ್ಯಕೀಯ ಪ್ರಕ್ರಿಯೆಗಳ ವ್ಯವಸ್ಥೆ ಮತ್ತು ಸಂಯೋಜನೆ.
  • ಜೆಪ್ರೇ ಪ್ರದೀಪ್ (27) – ಎಆರ್‌ಟಿ ಬ್ಯಾಂಕ್ ವ್ಯವಸ್ಥಾಪಕ.
  • ಎಸ್.ಕೆ. ಪರ್ವೀನ್ (42) – ಇವರ ಪಾತ್ರದ ಬಗ್ಗೆ ತನಿಖೆ.
  • ವಿಜಯ್ ಭಾಗ್ವಾ ರಾವ್ ಸಾಳುಂಕೆ (46) – ಬಟರ್‌ಫ್ಲೈ ಬಯೋ ಮತ್ತು ಎಆರ್‌ಟಿ ಬ್ಯಾಂಕ್‌ನಲ್ಲಿ ದಾಖಲೆ ನಿರ್ವಹಣೆ.
  • ಪಂಕಜ್ ಸೋನಿ (52) – ಮಧ್ಯವರ್ತಿ ಮತ್ತು ಸಂಯೋಜನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ.

ಇದಲ್ಲದೆ, ಸರೂರನಗರದ ಉದ್ಯಮಿ ಎಮಿರಿಶೆಟ್ಟಿ ದುರ್ಗಾ ಪ್ರಸಾದ್ (42) ಅವರನ್ನು ಆ ಪ್ರದೇಶದಲ್ಲಿ ದಾಖಲಾದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎರಡು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಜಾಲ

ಪ್ರಮುಖ ಆರೋಪಿ ಅಮಿತ್ ಶರ್ಮಾ ಅವರು ಬೇಗಂಪೇಟೆಯ ಪ್ರಕಾಶ್ ನಗರದ ಬಾಡಿಗೆ ಕಟ್ಟಡವೊಂದರಿಂದ ಸುಮಾರು ಎರಡು ವರ್ಷಗಳಿಂದ ಈ ಚಟುವಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕಟ್ಟಡಕ್ಕೆ ತಿಂಗಳಿಗೆ ಸುಮಾರು 50 ಸಾವಿರ ರೂಪಾಯಿ ಬಾಡಿಗೆ ಪಾವತಿಸಲಾಗುತ್ತಿತ್ತು ಎನ್ನಲಾಗಿದೆ.

ನಿಕ್ಕತ್ ಪರ್ವೀನ್ ಅವರು ಮುಖ್ಯವಾಗಿ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಿಳೆಯರನ್ನು ಕರೆತರಲು ಏಜೆಂಟರೊಂದಿಗೆ ಸಂಪರ್ಕ ಹೊಂದಿದ್ದರು. ಹೈದರಾಬಾದ್‌ನಲ್ಲಿ ಮಹಿಳೆಯರ ಪ್ರಯಾಣ, ವಸತಿ ಹಾಗೂ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳಿಗೆ ವ್ಯವಸ್ಥೆ ಮಾಡುತ್ತಿದ್ದರು ಎಂಬ ಆರೋಪವೂ ಇದೆ.

ನಕಲಿ ಆಧಾರ್, ಸಮ್ಮತಿ ಪತ್ರಗಳ ಸೃಷ್ಟಿ ಆರೋಪ

ಈ ಪ್ರಕರಣದ ಮತ್ತೊಂದು ಗಂಭೀರ ಆಯಾಮವೆಂದರೆ ನಕಲಿ ದಾಖಲೆಗಳ ಸೃಷ್ಟಿ. ಮಹಿಳೆಯರ ಆಧಾರ್ ಕಾರ್ಡ್‌ಗಳು, ಅಫಿಡವಿಟ್‌ಗಳು ಹಾಗೂ ಸಮ್ಮತಿ ಪತ್ರಗಳನ್ನು ನಕಲಿಯಾಗಿ ಸಿದ್ಧಪಡಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಲ್ಲದೆ, ಒಬ್ಬ ಮಹಿಳೆಯಿಂದ ಎಷ್ಟು ಬಾರಿ ಅಂಡಾಣು ದಾನ ಮಾಡಿಸಲಾಗಿದೆ, ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಸರಿಯಾಗಿವೆಯೇ, ಮಹಿಳೆಯರಿಗೆ ನೀಡಲಾದ ಹಣ ಮತ್ತು ಏಜೆಂಟರಿಗೆ ಪಾವತಿಸಲಾದ ಕಮಿಷನ್ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಐವಿಎಫ್ ಕೇಂದ್ರಗಳು ಹಾಗೂ ಎಆರ್‌ಟಿ ಬ್ಯಾಂಕ್‌ಗಳೊಂದಿಗೆ ಆರೋಪಿಗಳಿಗೆ ಇದ್ದ ಸಂಪರ್ಕವೇನು? ಈ ವೈದ್ಯಕೀಯ ಸಂಸ್ಥೆಗಳಿಗೆ ಮಹಿಳೆಯರನ್ನು ಹೇಗೆ ಕಳುಹಿಸಲಾಗುತ್ತಿತ್ತು? ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಈ ಚಟುವಟಿಕೆಗಳ ಬಗ್ಗೆ ಮಾಹಿತಿ ಇತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಈ ಪ್ರಕರಣವನ್ನು ಕೇವಲ ಅಕ್ರಮ ಹಣಕಾಸು ವಹಿವಾಟು ಅಥವಾ ವೈದ್ಯಕೀಯ ನಿಯಮಗಳ ಉಲ್ಲಂಘನೆಗೆ ಸೀಮಿತಗೊಳಿಸದೆ, ಮಹಿಳೆಯರ ಶೋಷಣೆ ಮತ್ತು ಮಾನವ ಕಳ್ಳಸಾಗಣೆಯ ಸಾಧ್ಯತೆಯ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ.

RELATED ARTICLES

Latest News