ಮಂಡ್ಯ,ನ.1- ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಇಂದಿನ ಆಧುನಿಕ ಯುಗದಲ್ಲಿ ಕನ್ನಡವು ಕೇವಲ ಮನೆಯ ಭಾಷೆಯಾಗಿ ಉಳಿಯದೆ ಜ್ಞಾನ, ವಿಜ್ಞಾನ ಮತ್ತು ಉದ್ಯೋಗದ ಭಾಷೆಯಾಗಿ ಬೆಳೆಯಬೇಕು ಎಂದು ಜಲಸಂಪನೂಲ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವ ರಾಯಸ್ವಾಮಿ ಅವರು ತಿಳಿಸಿದರು.
ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಮಂಡ್ಯ ಜಿಲ್ಲೆಯು ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ನಾಡು, ನುಡಿ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ನಿನ್ನೆ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 1,793 ಕೋಟಿ ರೂ. ವೆಚ್ಚದ 57 ಪ್ರಮುಖ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆ, ರಸ್ತೆ ಹಾಗೂ ಕಾಲುವೆ ದುರಸ್ತಿಗಾಗಿ 806 ಕೋಟಿ ರೂ., ಕಾವೇರಿ, ಕೆರಗೋಡು, ಶಿಂಷಾ, ಲೋಕಸರ ಹಾಗೂ ಮದ್ದೂರು ಶಾಖಾ ನಾಲೆಗಳ ಅಭಿವೃದ್ಧಿಗೆ 224 ಕೋಟಿ ರೂ.ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.
ಮಂಡ್ಯದ ಐತಿಹಾಸಿಕ ಮೈಷುಗರ್ ಕಾರ್ಖಾನೆಯ ಬಾಯಿಲಿಂಗ್ ಹೌಸ್ ಆಧುನೀಕರಣಕ್ಕೆ 60 ಕೋಟಿ ರೂ.,ಹಂಪಾಪುರದಲ್ಲಿ 400 ಕೆ.ವಿ. ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ 402.92 ಕೋಟಿ ರೂ. ಹಾಗೂ ನಾಗಮಂಗಲದ ಇರುಬ್ಬನಹಳ್ಳಿಯಲ್ಲಿ 66/11 ಕೆ.ವಿ. ಉಪಕೇಂದ್ರ ನಿರ್ಮಾಣಕ್ಕೆ 17.91 ಕೋಟಿ ರೂ., ಬಿ. ಹೊಸೂರು ಕಾಲೋನಿಯಲ್ಲಿ 100 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ, ಮಹಾದೇವಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಔಷಧ ಉಗ್ರಾಣ ನಿರ್ಮಾಣ, ದುದ್ದ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಹಾಗೂ ಹಲಗೂರಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯ ಉದ್ಘಾಟನೆಗೊಂಡಿವೆ ಎಂದು ಅವರು ತಿಳಿಸಿದರು.
ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಒಳಾಂಗಣ ಬ್ಯಾಸ್ಕೆಟ್ಬಾಲ್ ಕೋರ್ಟ್ಗೆ 3.50 ಕೋಟಿ ರೂ. ಹಾಗೂ ಶ್ರೀರಂಗಪಟ್ಟಣ ಕ್ರೀಡಾಂಗಣಕ್ಕೆ 1 ಕೋಟಿ ರೂ. ಮಂಜೂರು ಮಾಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯದೊಂದಿಗೆ ಸರ್ಕಾರ ಜಾರಿಗೆ ತಂದಿರುವ ಐದೂ ಗ್ಯಾರಂಟಿ ಯೋಜನೆಗಳು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ತಲುಪಿವೆ ಎಂದ ಸಚಿವರು ಅಂಕಿ-ಅಂಶಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 30 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕೆ ಆರ್ ನಂದಿನಿ, ಪೋಲಿಸ್ ವರಿಷ್ಠಾಧಿಕಾರಿ ಶೋಭರಾಣಿ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
