Monday, November 25, 2024
Homeಜಿಲ್ಲಾ ಸುದ್ದಿಗಳು | District Newsಗುಡ್ಡೆ ಮಾಂಸಕ್ಕಾಗಿ ಗಲಾಟೆ, ಓರ್ವ ಸಾವು

ಗುಡ್ಡೆ ಮಾಂಸಕ್ಕಾಗಿ ಗಲಾಟೆ, ಓರ್ವ ಸಾವು

ತಿ.ನರಸೀಪುರ, ಏ.14-ಯುಗಾದಿ ಹಬ್ಬದ ಮಾರನೇ ದಿನ ಗುಡ್ಡೆ ಮಾಂಸ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ 12 ಮಂದಿಯ ಗುಂಪು ನಾಲ್ವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮನಾಳು ಗ್ರಾಮದಲ್ಲಿ ನಡೆದಿದೆ.

ಹನುಮನಾಳು ಗ್ರಾಮದ ನಾಗ, ಸುರೇಂದ್ರ, ರಘು ಹಾಗೂ ಕೃಷ್ಣ ಹಲ್ಲೆಗೊಳಗಾದವರು. ಈ ಪೈಕಿ ಮಾರಣಾಂತಿಕ ಹಲ್ಲೆಗೊಳಗಾದ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

ಹನುಮನಾಳು ಗ್ರಾಮದ ರಾಜು, ನಾಗೇಂದ್ರ, ಸುರೇಶ್, ಜೀವನ್, ರಾಜು, ನಾಗರಾಜು, ರೇವಣ್ಣ, ಪುಟ್ಟಸ್ವಾಮಿ, ಗಿರೀಶ್, ಕಿರಣ್ , ಶಿಲ್ಪ ಹಾಗೂ ರಮೇಶ್ ಎಂಬವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು 12 ಮಂದಿ ಆರೋಪಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹನುಮನಾಳು ಗ್ರಾಮದ ರಘು ಎಂಬಾತ ಯುಗಾದಿ ಹಬ್ಬದ ಮಾರನೇ ದಿನ ಹೊಸತೊಡಕು ಮಾಂಸಕ್ಕಾಗಿ ರಮೇಶ್ ಎಂಬವರ ಬಳಿ ಹೆಸರು ನೋಂದಾಯಿಸಿಕೊಂಡಿದ್ದ ಎನ್ನಲಾಗಿದೆ.

ರಮೇಶ್ ಗುಡ್ಡೆ ಮಾಂಸ ಹಂಚಿಕೆ ಮಾಡುತ್ತಿದ್ದ ವೇಳೆ ರಘು ಮಾಂಸ ಕೊಡುವಂತೆ ರಮೇಶ್‍ನನ್ನು ಕೇಳಿದಾಗ ಆತ ನಿನಗೆ ಮಾಂಸ ಕೊಡುವುದಿಲ್ಲ ಎಂದಿದ್ದಾನೆ. ಮತ್ತೆ ಮಾಂಸ ಕೇಳಿದಾಗ ಕೋಪಗೊಂಡರಮೇಶ್ ಇತರ ಸಹಚರರಾದ ರಾಜು, ನಾಗೇಂದ್ರ, ಸುರೇಶ್, ಜೀವನ್ ಹಾಗೂ ರಾಜು ಎಂಬವರೊಡಗೂಡಿ ರಘು ಮೇಲೆ ಹಲ್ಲೆ ನಡೆಸಿದ್ದಾನೆ.

ನಂತರ ಮಾರನೇ ದಿನ ಮತ್ತೆ ಗುಂಪು ಕಟ್ಟಿಕೊಂಡು ರಘು ಮನೆ ಮುಂದೆ ಗಲಾಟೆ ಮಾಡಿ ಆತನ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಹಾಕಿ ಹಲ್ಲೆಮಾಡಿದ್ದಾನೆ. ರಘುವಿನ ಪತ್ನಿಯ ಕೋರಿಕೆಯ ಮೇರೆಗೆ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದಾರೆ.

ಆನಂತರ ಮನೆಗೆ ಬಂದಾಗ ಗಲಾಟೆ ಮಾಡಿದ ವಿಷಯ ತಿಳಿದ ರಘುವಿನ ಕೆಲ ಸಂಬಂಧಿಕರು ವಿಚಾರ ಮಾಡಲು ರಾಜುರವರ ವಠಾರಕ್ಕೆ ಹೋದ ವೇಳೆ 12 ಮಂದಿಯ ತಂಡ ನಾಗ, ಸುರೇಂದ್ರ, ರಘು ಹಾಗೂ ಕೃಷ್ಣರವರ ಮೇಲೆ ಏಕಾಏಕಿ ದೊಣ್ಣೆ, ರಿಪೀಸ್ ಪಟ್ಟಿ, ಕಬ್ಬಿಣದ ರಾಡಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಹಲ್ಲೆಗೊಳ ಗಾದ ಕೃಷ್ಣ ಎಂಬವರು ತೀವ್ರ ಗಾಯಗಳಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ನಾಗ, ಸುರೇಂದ್ರ, ರಘು ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಕೃಷ್ಣರವರನ್ನು ಮೈಸೂರಿನ ಗೋಪಾಲಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಕೃಷ್ಣ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬನ್ನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮುಖ್ಯ ಪೇದೆ ಎಸ್. ಎಸ್. ಶಂಕರ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News