Homeರಾಜ್ಯನಕಲಿ ಔಷಧ ಜಾಲದ ; ಟರ್ಕಿ, ಅಜರ್‌ಬೈಜಾನ್‌, ಯುಎಇಯಲ್ಲಿ ಪ್ರಶಾಂತ್‌ ವಹಿವಾಟಿನ ಕುರಿತು ಇಡಿ ತನಿಖೆ

ನಕಲಿ ಔಷಧ ಜಾಲದ ; ಟರ್ಕಿ, ಅಜರ್‌ಬೈಜಾನ್‌, ಯುಎಇಯಲ್ಲಿ ಪ್ರಶಾಂತ್‌ ವಹಿವಾಟಿನ ಕುರಿತು ಇಡಿ ತನಿಖೆ

ಬೆಂಗಳೂರು,ನ.5- ಕರ್ನಾಟಕದಲ್ಲಿ ಪತ್ತೆಯಾದ ನಕಲಿ ಔಷಧ ಜಾಲ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ವಿಸ್ತರಿಸಿದ್ದು, ಪ್ರಮುಖ ಶಂಕಿತ ಆರ್‌. ಪ್ರಶಾಂತ್‌ ಅಲಿಯಾಸ್‌‍ ಪ್ರಶಾಂತ್‌ ರಾಜನ್‌ ಬಾಬು ಅವರ ವಿದೇಶಿ ಆರ್ಥಿಕ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದೆ.

ನಕಲಿ ಔಷಧ ಜಾಲದ ಅಕ್ರಮ ಹಣ ವರ್ಗಾವಣೆ ಮತ್ತು ಹಣದ ಮೂಲದ ಕುರಿತು ತನಿಖೆ ನಡೆಸುತ್ತಿರುವ ಇಆ, ಪ್ರಶಾಂತ್‌ಗೆ ಟರ್ಕಿ, ಅಜರ್‌ಬೈಜಾನ್‌ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್‌್ಸನೊಂದಿಗೆ ಇರುವ ಸಂಪರ್ಕಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ವಿಶೇಷವಾಗಿ ಯುಎಇಯ ಶಾರ್ಜಾದಲ್ಲಿ ಆತ ನಡೆಸಿದ್ದ ಸಾಧ್ಯತೆಯಿರುವ ವ್ಯವಹಾರಗಳ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ನಗರದ ಹೊರವಲಯದ ತಾವರೆಕೆರೆಯಲ್ಲಿ ಆಗಸ್ಟ್‌ 18ರಂದು ನಕಲಿ ಔಷಧ ಜಾಲ ಪತ್ತೆಯಾಗಿತ್ತು. ಈ ಪ್ರಕರಣದ ಕುರಿತು ಕರ್ನಾಟಕ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಪ್ರತ್ಯೇಕ ತನಿಖೆ ನಡೆಸುತ್ತಿದೆ. ಇದೇ ವೇಳೆ ಇಡಿ ಕೂಡ ಹಣ ವರ್ಗಾವಣೆ ತಡೆ ಕಾಯ್ದೆ, 2002ರ ಅಡಿಯಲ್ಲಿ ತನಿಖೆ ಆರಂಭಿಸಿದ್ದು, ಸೋಮವಾರ ನಡೆಸಿದ ದಾಳಿಯಲ್ಲಿ ಬೆಂಗಳೂರಿನ ಮಿನರ್ವ ವೃತ್ತದಲ್ಲಿರುವ ಕೃಪಾ ಹೆಲ್ತ್‌ಕೇರ್‌ ಮಾಲೀಕ ವೀರೇಶ್‌ ಕುಮಾರ್‌ ಜೈನ್‌ ಅವರಿಗೆ ಸೇರಿದ ಸುಮಾರು 9 ಲಕ್ಷ ಹಣವನ್ನು ಫ್ರೀಜ್‌ ಮಾಡಿದೆ.

ಟರ್ಕಿಯಲ್ಲಿ ಲೇಬಲ್‌ಗಳಿಗಾಗಿ ಪ್ರಯಾಣ
ಎಸ್‌‍ಐಟಿ ತನಿಖೆಯಲ್ಲಿ ಪ್ರಶಾಂತ್‌ ಹಲವು ಬಾರಿ ಟರ್ಕಿಗೆ ತೆರಳಿದ್ದ ಸಂಗತಿ ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ನಕಲಿ ಔಷಧಗಳಿಗೆ ಅಂಟಿಸಲು ಬಳಸಲಾಗುತ್ತಿದ್ದ ಅಸಲಿ ಔಷಧೀಯ ಲೇಬಲ್‌ಗಳನ್ನು ಪಡೆಯಲು ಟರ್ಕಿಯಲ್ಲಿ ಮಧ್ಯವರ್ತಿಗಳ ಜಾಲದೊಂದಿಗೆ ಆತ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ಇದೆ.

ಜಾಗತಿಕ ಔಷಧ ಕಂಪನಿಗಳ ಬ್ರ್ಯಾಂಡ್‌ಗಳಿಗೆ ಸೇರಿದ ನಕಲಿ ಕಿಖ ಕೋಡ್‌ಗಳು ಹಾಗೂ ಸ್ಟಾಂಪ್‌ಗಳನ್ನು ಬಳಸಲಾಗುತ್ತಿತ್ತು ಎಂಬ ಆರೋಪವೂ ತನಿಖೆಯಲ್ಲಿದೆ. ಹೀಗಾಗಿ ಟರ್ಕಿಯಲ್ಲಿನ ಪ್ರಶಾಂತ್‌ನ ಸಂಪರ್ಕಗಳು ಮತ್ತು ಅಲ್ಲಿನ ಹಣಕಾಸು ವ್ಯವಹಾರಗಳ ಸ್ವರೂಪವನ್ನು ಇಡಿ ಪರಿಶೀಲಿಸುತ್ತಿದೆ.

ಅದೇ ರೀತಿ, ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಪ್ರಶಾಂತ್‌ ಯಾವುದೇ ವ್ಯವಹಾರ ನಡೆಸಿದ್ದನೇ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆತನ ವಿದೇಶ ಪ್ರವಾಸಗಳಿಗೆ ಹಣ ಎಲ್ಲಿಂದ ಬಂದಿತು ಮತ್ತು ವಿದೇಶಿ ಖಾತೆಗಳು ಅಥವಾ ವ್ಯಕ್ತಿಗಳ ಮೂಲಕ ಹಣ ವರ್ಗಾವಣೆ ನಡೆದಿದೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಅಕ್ರಮ ಹಣದ ಹಾದಿ ಪತ್ತೆಗೆ ತನಿಖೆ
ನಕಲಿ ಔಷಧಗಳ ಮಾರಾಟದಿಂದ ಬಂದಿರಬಹುದಾದ ಹಣವನ್ನು ಹೇಗೆ ವರ್ಗಾವಣೆ ಮಾಡಲಾಯಿತು ಮತ್ತು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದನ್ನು ಇಡಿ ಪತ್ತೆಹಚ್ಚಲು ಮುಂದಾಗಿದೆ. ರಿಯಲ್‌ ಎಸ್ಟೇಟ್‌ ಹೂಡಿಕೆ, ಶೆಲ್‌ ಕಂಪನಿಗಳು, ಬೇನಾಮಿ ಆಸ್ತಿಗಳು ಹಾಗೂ ಇತ್ತೀಚಿನ ಐಷಾರಾಮಿ ಖರೀದಿಗಳ ಕುರಿತ ದಾಖಲೆಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತನಿಖೆಯ ಮತ್ತೊಂದು ಪ್ರಮುಖ ಅಂಶವೆಂದರೆ ದೇಶದೊಳಗಿನ ನಕಲಿ ಔಷಧಗಳ ಪೂರೈಕೆ ಜಾಲ. ವಿವಿಧ ರಾಜ್ಯಗಳ ಉತ್ಪಾದನಾ ಘಟಕಗಳಿಂದ ಕಡಿಮೆ ಬೆಲೆಯ ಜೆನೆರಿಕ್‌ ಔಷಧಿಗಳನ್ನು ಪಡೆದು, ಅವುಗಳನ್ನು ಹೊಸ ಬಾಟಲಿಗಳಲ್ಲಿ ಮರುಪ್ಯಾಕ್‌ ಮಾಡಿ ದುಬಾರಿ ಬ್ರ್ಯಾಂಡ್‌ಗಳ ಔಷಧಿಗಳೆಂದು ಮರುಲೇಬಲ್‌ ಮಾಡಲಾಗುತ್ತಿತ್ತು ಎಂಬ ಆರೋಪವಿದೆ.

ಫೈಜರ್‌ ಔಷಧಿಗಳ ಹೆಸರಿನಲ್ಲಿ ನಕಲಿ ಉತ್ಪನ್ನ
ತನಿಖಾ ಸಂಸ್ಥೆಗಳ ಪ್ರಕಾರ, ಜೆನೆರಿಕ್‌ ಔಷಧಿಗಳನ್ನು ಱಝವಿಸೆಫ್ಟಾೞ ಮತ್ತು ಎಂಬ್ಲಾವಿಯೊ ಸೇರಿದಂತೆ ದುಬಾರಿ ಫೈಜರ್‌ ಪ್ರತಿಜೀವಕಗಳ ಹೆಸರಿನಲ್ಲಿ ಮರುಲೇಬಲ್‌ ಮಾಡಲಾಗಿದೆ ಎಂಬ ಆರೋಪವಿದೆ. ನಂತರ ಈ ಔಷಧಿಗಳನ್ನು ಡಿಎಂ ಫಾರ್ಮಾಸ್ಯುಟಿಕಲ್‌್ಸ ಮೂಲಕ ವಿತರಿಸಿ, ವೀರೇಶ್‌ ಕುಮಾರ್‌ ಜೈನ್‌ ಅವರ ಕೃಪಾ ಹೆಲ್ತ್‌ಕೇರ್‌ಗೆ ಪೂರೈಸಲಾಗುತ್ತಿತ್ತು ಎಂದು ಇಡಿ ಆರೋಪಿಸಿದೆ.

ಕೃಪಾ ಹೆಲ್ತ್‌ಕೇರ್‌ ಈ ಔಷಧಿಗಳನ್ನು ಇತರ ಔಷಧೀಯ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಿಗೆ ನೈಜ ಔಷಧಿಗಳೊಂದಿಗೆ ಪೂರೈಸುತ್ತಿದ್ದರೆಂಬ ಆರೋಪವೂ ತನಿಖೆಯಲ್ಲಿದೆ. ಈ ವ್ಯವಸ್ಥೆಯ ಉದ್ದೇಶ ನಕಲಿ ಔಷಧಗಳ ಮೂಲವನ್ನು ಪತ್ತೆಹಚ್ಚಲು ಕಷ್ಟವಾಗುವಂತೆ ಮಾಡುವುದು ಎನ್ನಲಾಗಿದೆ. ಇದೀಗ ಇಡಿ ತನಿಖೆ ಕೇವಲ ದೇಶೀಯ ಪೂರೈಕೆ ಜಾಲಕ್ಕೆ ಸೀಮಿತವಾಗದೆ, ಟರ್ಕಿಅಜರ್‌ಬೈಜಾನ್‌ ಯುಎಇ ಸಂಪರ್ಕಗಳತ್ತವೂ ವಿಸ್ತರಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಅಂತರರಾಷ್ಟ್ರೀಯ ಆಯಾಮ ನೀಡಿದೆ. ವಿದೇಶಿ ವಹಿವಾಟುಗಳು, ಹಣದ ಮೂಲ ಹಾಗೂ ಅಕ್ರಮ ಆಸ್ತಿಗಳ ಕುರಿತ ದಾಖಲೆಗಳು ಲಭ್ಯವಾದರೆ, ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಮತ್ತು ಸಂಸ್ಥೆಗಳು ತನಿಖೆಯ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ.

RELATED ARTICLES

Latest News