ಚೆನ್ನೈ, ನ.5- ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭಕ್ತರು ಬರೋಬ್ಬರಿ 5.06 ಕೋಟಿ ನಗದು ಕಾಣಿಕೆ ನೀಡಿದ್ದಾರೆ. ಇದರೊಂದಿಗೆ 160 ಗ್ರಾಂ ಚಿನ್ನ ಹಾಗೂ 1,540 ಗ್ರಾಂ ಬೆಳ್ಳಿಯೂ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ತಮಿಳು ಮಾಸವಾದ ಐಪ್ಪಸಿ ಅಂಗವಾಗಿ ದೇವಸ್ಥಾನದ ಹುಂಡಿಗಳನ್ನು ತೆರೆದು ಕಾಣಿಕೆಗಳ ಎಣಿಕೆ ಕಾರ್ಯ ನಡೆಸಿದ್ದಾರೆ. ಈ ವೇಳೆ ಭಕ್ತರು ಸಲ್ಲಿಸಿದ್ದ ನಗದು, ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಇತರ ವಸ್ತುಗಳ ಲೆಕ್ಕ ಮಾಡಲಾಗಿದೆ.
ದೇವರ ಮೇಲಿನ ಭಕ್ತರ ಅಪಾರ ನಂಬಿಕೆಗೆ ಈ ಕಾಣಿಕೆಗಳು ಸಾಕ್ಷಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತಮಿಳುನಾಡಿನ ಪ್ರಮುಖ ದೇವಸ್ಥಾನಗಳಾದ ಪಳನಿಯ ಅರುಳಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನ, ತಿರುಚೆಂದೂರಿನ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ತಿರುಚಿರಾಪಳ್ಳಿಯ ಸಮಯಪುರಂ ಮಾರಿಯಮ ದೇವಸ್ಥಾನ ಹಾಗೂ ತಿರುತ್ತಣಿಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳಿಗೂ ಭಕ್ತರಿಂದ ದೊಡ್ಡ ಪ್ರಮಾಣದಲ್ಲಿ ಕಾಣಿಕೆಗಳು ಸಲ್ಲಿಕೆಯಾಗುತ್ತವೆ.
ಹುಂಡಿಗಳನ್ನು ಕಾಲಕಾಲಕ್ಕೆ ಹಿರಿಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಅಧಿಕಾರಿಗಳ ಸಮುಖದಲ್ಲಿ ತೆರೆಯಲಾಗುತ್ತದೆ. ಬಳಿಕ ನಗದು ಹಣವನ್ನು ಎಣಿಕೆ ಮಾಡಿ, ಚಿನ್ನ ಮತ್ತು ಬೆಳ್ಳಿ ವಸ್ತುಗಳ ತೂಕ ಹಾಗೂ ವಿವರಗಳನ್ನು ದಾಖಲಿಸಲಾಗುತ್ತದೆ. ಇದೇ ವೇಳೆ, ಪಳನಿಯ ಅರುಳ್ಮಿಗು ದಂಡಾಯುಧಪಾಣಿ ಸ್ವಾಮಿ ದೇವಸ್ಥಾನಕ್ಕೆ 2.26 ಕೋಟಿ ನಗದು ಕಾಣಿಕೆ ಬಂದಿದ್ದು, 286 ಗ್ರಾಂ ಚಿನ್ನ ಹಾಗೂ 10.752 ಕೆ.ಜಿ. ಬೆಳ್ಳಿಯೂ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
