ಬೆಂಗಳೂರು, ನ.5- ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ-ಎಸ್ಐಆರ್ ರದ್ದಾಗಬೇಕು, ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಇಂಡಿ ಬ್ಲಾಕ್ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಂಪುಟದ ಹಲವು ಸಚಿವರು, ಬಹುಭಾಷಾ ನಟ ಪ್ರಕಾಶ್ ರಾಜ್, ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಕೆ ಪ್ರಕಾಶ್, ಸಿಪಿಐ ರಾಜ್ಯ ಕಾರ್ಯದರ್ಶಿ ಸುಂದರೇಶ್, ಸಿಪಿಐ-ಎಂಎಲ್ ರಾಜ ಕಾರ್ಯದರ್ಶಿ ಕ್ಲಿಪ್ಟನ್ ರೋಜಾರಿಯೋ, ಫಾರ್ವರ್ಡ್ ಬ್ಲಾಕ್ ಅಧ್ಯಕ್ಷ ಜಿ.ಆರ್.ಶಿವಶಂಕರ್, ಸಮಾಜವಾದಿ ಪಕ್ಷದ ಅಧ್ಯಕ್ಷ ಮಂಜಪ್ಪ, ಸರ್ವೋದಯ ಕರ್ನಾಟಕದ ಬಡಗಲಪುರ ನಾಗೇಂದ್ರ, ಎದ್ದೇಳು ಕರ್ನಾಟಕ ಸಂಘಟನೆಯ ನೂರ್ ಶ್ರೀಧರ್, ದಲಿತ ಸಂಘಟನೆಗಳ ಒಕ್ಕೂಟದ ಇಂದುಧರ ಹೊನ್ನಾಪುರ, ಮೋಹನ್ ರಾಜ್, ಕಾಕ್ರೋಚ್ ಜನತಾ ಪಾರ್ಟಿಯ ರಾಹುಲ್, ಆಫ್ರಿನ್, ಕರ್ನಾಟಕ ಮುಸ್ಲಿಂ ಮತ್ತಹದೆ ಮಹಾಜ್ ಮತ್ತಿತರ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನಾ ಸಮಾವೇಶವನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ವಿವಿಧ ಸಂಘಟನೆಗಳ ಜೆನ್ ಝಿಗಳಿಗೆ ತಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.
ಎ ಎಸ್ ಎಫ್ ರಾಜ್ಯ ಕಾರ್ಯದರ್ಶಿ ವೀಣಾ ನಾಯಕ್, ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಎಸ್ ಐ ಆರ್ ರದ್ದುಗೊಂಡು, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ ಎಂದರು.
ಡಿ ವೈ ಎಫ್ ಐ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳು ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಾರೆ. ಅವರನ್ನು ಪತ್ತೆ ಹಚ್ಚಲು ಎಸ್ ಐ ಆರ್ ನಡೆಸುವುದಾಗಿ ಹೇಳಲಾಗಿತ್ತು. ಈವರೆಗೂ ಒಬ್ಬನೆ ಒಬ್ಬ ಅಕ್ರಮ ವಲಸಿಗನನ್ನು ಪತ್ತೆ ಹಚ್ಚಲಾಗಿಲ್ಲ. ರಾಜ್ಯದಲ್ಲಿ 500 ಜನ ನೇಪಾಳಿಗರು ಪತ್ತೆಯಾಗಿದ್ದಾರೆ. ಉಳಿದಂತೆ ನುಸುಳುಕೋರರು ಸಿಕ್ಕಿಲ್ಲ. ಹಾಗಿದ್ದರೆ ಎಸ್ ಐ ಆರ್ ನ ಉದ್ದೇಶ ಈಡೇರಿದೆಯೇ ಎಂದು ಪ್ರಶ್ನಿಸಿದರು.
ಎ ಐ ಎಸ್ ಐ ನ ಶರತ್ ಮಾತನಾಡಿ, ದೇಶದಲ್ಲಿ ಯುವ ಸಮೂಹ ಹೋರಾಟ ಆರಂಭಿಸಿ, ಪ್ರಜಾಪ್ರಭುತ್ವದ ಅಪಾಯವನ್ನು ಮನದಟ್ಟು ಮಾಡಿಕೊಟ್ಟಿದೆ. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತು ಆರ್ ಎಸ್ ಎಸ್ ನ ಗೂಂಡಾಗಳು ದೌರ್ಜನ್ಯ ನಡೆಸಿದ್ದಾರೆ. ಆದರೂ, ಯಾರು ಹೆದರಿಲ್ಲ. ಮುಂದಿನ ದಿನಗಳಲ್ಲಿಯೂ ಹೋರಾಟ ಮುಂದುವರಿಯಲಿದೆ. ದ್ವೇಷ ಹರಡಲು ಅವಕಾಶ ನಿರಾಕರಿಸಲಾಗುತ್ತದೆ ಎಂದರು.
ಹರಾಜಕತೆಯನ್ನು ಸೃಷ್ಟಿಸಿರುವ ಬಿಜೆಪಿಯೇ ಹರಾಜಕತೆ ನಿಲ್ಲಲಿ, ದೇಶ ಉಳಿಯಲಿ ಎಂದು ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕರು, ರೈತ ಮುಖಂಡರು, ಕಾಂಗ್ರೆಸ್ ನಾಯಕರು, ಎಡ ಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.
ನಿರ್ಣಯಗಳ ಅಂಗೀಕಾರ:
ಚುನಾವಣಾ ಆಯೋಗ ಸಲ್ಲಿಸಿರುವ ಎಸ್ಐಆರ್ ನ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ಎಂಬುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಪ್ರತಿಭಟನಾ ಸಭೆಯಲ್ಲಿ ಅಂಗೀಕರಿಸಲಾಯಿತುಯ.
ಮಾಜಿ ಸಚಿವ ದಿನೇಶ್ ಗುಂಡೂರಾವ್, ಎಸ್ಐಆರ್ ರದ್ದುಗೊಳ್ಳಬೇಕು. ಮುಖ್ಯ ಚುನಾವಣಾ ಆಯುಕ್ತರ ರಕ್ಷಣೆಗಾಗಿ ಜಾರಿಗೆ ತರಲಾಗಿರುವ ವಿಶೇಷ ಕಾಯ್ದೆಯನ್ನು ಹಿಂಪಡೆಯಬೇಕು. ಸುಪ್ರೀಂ ಕೋರ್ಟಿನ ಆದೇಶದಂತೆ ಆಯೋಗದ ಆಯಕ್ತರ ನೇಮಕಾತಿಗೆ ಸ್ವಾಯತ್ತೆ ಖಾತ್ರಿ ನೀಡಬೇಕು ಎಂದು ಆಗ್ರಹಿಸುವ ನಿರ್ಣಯಗಳನ್ನು ಮಂಡಿಸಿದರು.
ಬಿಜೆಪಿ ಕೋಮು ವಿಭಜನೆಯ ಮೂಲಕ ದೇಶದಲ್ಲಿ ಶಾಂತಿ ಸೌಹಾರ್ದತೆ ಹಾಳು ಮಾಡಲು ಯತ್ತಿಸುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶದಿಂದ ಭಾರತಕ್ಕೆ ಮೂರು ಕೋಟಿ ಆಕ್ರಮ ನುಸುಳುಕೋರರು ಬಂದಿದ್ದಾರೆ ಎಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇಪದೇ ಹೇಳುತ್ತಿದ್ದಾರೆ.
ಎಸ್ಐಆರ್ನಲ್ಲಿ ಎಷ್ಟು ಜನ ಬಾಂಗ್ಲಾ ಹಾಗೂ ಪಾಕಿಸ್ತಾನದ ನುಸುಳುಕೋರರು ಪತ್ತೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಬೇಕು. ರಾಜ್ಯದಲ್ಲಿ ನಡೆದ ಎಸ್ಐಆರ್ನಲ್ಲಿ 68 ನೇಪಾಳಿಗಳು ಪತ್ತೆಯಾಗಿದ್ದಾರೆ. ಉಳಿದಂತೆ ಅಮೆರಿಕ ಹಾಗೂ ಆಸ್ಟ್ರೇಲಿಯಾದ ಇಬ್ಬರು ಪ್ರಜೆಗಳು ಸಿಕ್ಕಿದ್ದಾರೆ. ಬಿಜೆಪಿ ನಾಯಕರು ಕೋಮು ದ್ವೇಷ ಸೃಷ್ಟಿಸುವಂತಹ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಅಸ್ಥಿಪಂಜರದ ವೇಷ ಧರಿಸಿ ವಿನೂತನ ಪ್ರತಿಭಟನೆ
ಬೆಂಗಳೂರು,ನ.5- ಮತಗಳ್ಳತನದ ವಿರುದ್ಧ ಇಂದು ಕಾಂಗ್ರೆಸ್ ಕಾರ್ಯಕರ್ತರು ವಿನೂತನ ರೀತಿಯಲ್ಲಿ ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಸ್ಥಿಪಂಜರದ ವೇಷ ಧರಿಸಿ, ಪ್ರಜಾಪ್ರಭುತ್ವದ ಅವನತಿ ಹಾಗೂ ಚುನಾವಣಾ ಆಯೋಗದ ಮೇಲಿನ ಜನರ ವಿಶ್ವಾಸ ಕುಸಿಯುತ್ತಿರುವುದನ್ನು ಸಾಂಕೇತಿಕವಾಗಿ ಖಂಡಿಸಿದರು.
ಇಂಡಿಯಾ ಒಕ್ಕೂಟ ಕರೆ ನೀಡಿದ್ದ ಮತಗಳ್ಳತನದ ವಿರುದ್ಧದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಭಾಗವಾಗಿ ಈ ಹೋರಾಟ ನಡೆಯಿತು.ಇದು ಕೇವಲ ಒಬ್ಬ ವ್ಯಕ್ತಿಯ ವಿರುದ್ಧದ ಪ್ರತಿಭಟನೆಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸುವ, ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಪ್ರಶ್ನಿಸುವ ಹೋರಾಟ.
ಮತಗಳ್ಳತನ ನಿಲ್ಲುವವರೆಗೂ, ಪ್ರಜಾಪ್ರಭುತ್ವಕ್ಕೆ ನ್ಯಾಯ ಸಿಗುವವರೆಗೂ ನಮ ಹೋರಾಟ ನಿಲ್ಲದು. ಮತಗಳ್ಳತನ ವೋಟ್ ಚೋರಿ ಇಂಡಿಯಾ ಒಕ್ಕೂಟ ಕಾಂಗ್ರೆಸ್ ಪ್ರಜಾಪ್ರಭುತ್ವರಕ್ಷಣೆಯಾಗುವವರೆಗೂ ಹೋರಾಟ ನಿಲ್ಲದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಭೈರಸಂದ್ರ ನಾಗರಾಜ್ ಮತ್ತಿತರ ಕಾರ್ಯಕರ್ತರು, ಮುಖಂಡರು ಇದ್ದರು.
