ಬೆಂಗಳೂರು,ನ.5- ವಿಶ್ವವಿಖ್ಯಾತ ವಿಧಾನಸೌಧಕ್ಕೆ ಮತ್ತಷ್ಟು ಮೆರುಗು ನೀಡುವುದರ ಜೊತೆಗೆ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಯೋಜನೆ ರೂಪಿಸಿದೆ. ಸುಮಾರು 15 ಕೋಟಿ ರೂ.ಗಳಿಂದ 20 ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧದ ಮೇಲೆ ಅತ್ಯಾಧುನಿಕ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಹಾಗೂ ಲೇಸರ್ ಲೈಟ್ ಶೋ ವ್ಯವಸ್ಥೆ ಅಳವಡಿಸಲು ಪ್ರಾಧಿಕಾರ ಮುಂದಾಗಿದೆ.
ಈ ಯೋಜನೆಗೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದು, ಅಗತ್ಯ ಅನುದಾನ ಒದಗಿಸಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.ಮೈಸೂರು ಅರಮನೆ ಮಾದರಿಯಲ್ಲಿ ವಿಧಾನಸೌಧದ ಭವ್ಯ ಕಟ್ಟಡದ ಮೇಲೆ ಧ್ವನಿ ಮತ್ತು ದೃಶ್ಯಗಳ ಸಂಯೋಜನೆಯೊಂದಿಗೆ 3ಡಿ ಪ್ರೊಜೆಕ್ಷನ್ ಪ್ರದರ್ಶನ ನಡೆಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ವಾರಾಂತ್ಯಗಳಲ್ಲಿ ಲೇಸರ್ ಶೋ :
ಈ ಯೋಜನೆಯಡಿ ವಿಧಾನಸೌಧದ ಮೇಲೆ ಶಾಶ್ವತ ಲೇಸರ್ ಮ್ಯಾಪಿಂಗ್ ವ್ಯವಸ್ಥೆ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಹೈಡ್ರಾಲಿಕ್ ಉಪಕರಣಗಳು ಸೇರಿದಂತೆ ಅಗತ್ಯ ತಾಂತ್ರಿಕ ಹಾರ್ಡ್ವೇರ್ಗಳನ್ನು ಅಳವಡಿಸುವ ಪರಿಕಲ್ಪನೆ ರೂಪಿಸಲಾಗಿದೆ. ವ್ಯವಸ್ಥೆ ಕಾರ್ಯಾರಂಭಿಸಿದ ಬಳಿಕ ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಸಾರ್ವಜನಿಕರಿಗೆ ಧ್ವನಿ ಸಹಿತ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಪ್ರದರ್ಶನ ಆಯೋಜಿಸುವ ಉದ್ದೇಶವಿದೆ.
ವಿಧಾನಸೌಧದ ವಾಸ್ತುಶಿಲ್ಪ, ಅದರ ಐತಿಹಾಸಿಕ ಮಹತ್ವ ಹಾಗೂ ಕರ್ನಾಟಕದ ವೈಶಿಷ್ಟ್ಯಗಳನ್ನು ಬೆಳಕು ಮತ್ತು ದೃಶ್ಯಗಳ ಮೂಲಕ ಜನರಿಗೆ ಪರಿಚಯಿಸಲು ಈ ವ್ಯವಸ್ಥೆ ನೆರವಾಗುವ ನಿರೀಕ್ಷೆಯಿದೆ. ಇದರಿಂದ ವಿಧಾನಸೌಧವು ಕೇವಲ ಆಡಳಿತದ ಕೇಂದ್ರವಾಗಿರದೆ, ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿಯೂ ರೂಪುಗೊಳ್ಳಲಿದೆ ಎಂಬ ಆಶಯವಿದೆ.
ಸಾರ್ವಜನಿಕರಿಗೆ ಉಚಿತ ವೀಕ್ಷಣೆ :
ಈ ಲೇಸರ್ ಲೈಟ್ ಶೋವನ್ನು ಸಾರ್ವಜನಿಕರು ಉಚಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶವನ್ನು ಜಿಬಿಎ ಹೊಂದಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಕುಟುಂಬ ಸಮೇತರಾಗಿ ವಿಧಾನಸೌಧಕ್ಕೆ ಭೇಟಿ ನೀಡುವವರಿಗೆ ಹೊಸ ಅನುಭವ ಒದಗಿಸುವುದರ ಜತೆಗೆ, ಬೆಂಗಳೂರಿಗೆ ಆಗಮಿಸುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಆಕರ್ಷಣೆಯನ್ನೂ ಹೆಚ್ಚಿಸುವ ನಿರೀಕ್ಷೆಯಿದೆ.
ನಗರದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವುದು, ವಿಧಾನಸೌಧದ ವೈಭವವನ್ನು ಮತ್ತಷ್ಟು ಎತ್ತರಕ್ಕೆ ಎತ್ತಿಹಿಡಿಯುವುದು ಹಾಗೂ ಸಾರ್ವಜನಿಕರಿಗೆ ವಿಶಿಷ್ಟ ವರ್ಣ, ವರ್ಣಿತವಾದ ದೃಶ್ಯಾನುಭವ ಒದಗಿಸುವುದು ಈ ಯೋಜನೆಯ ಉದ್ದೇಶಗಳಾಗಿವೆ.
ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಿರ್ಧಾರ :
ಕಳೆದ ವಾರ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ತಾಂತ್ರಿಕ ವ್ಯವಸ್ಥೆ, ಅನುದಾನ ಹಾಗೂ ಇತರ ಸಿದ್ಧತೆಗಳನ್ನು ಕೈಗೊಳ್ಳುವ ಪ್ರಕ್ರಿಯೆ ಮುಂದುವರಿಯುವ ನಿರೀಕ್ಷೆಯಿದೆ.
ಒಟ್ಟಾರೆ, ಸುಮಾರು 20 ಕೋಟಿ ರೂ. ವೆಚ್ಚದ ಈ ಯೋಜನೆ ಸಾಕಾರಗೊಂಡರೆ, ಬೆಂಗಳೂರಿನ ಪ್ರಮುಖ ಹೆಗ್ಗುರುತಾಗಿರುವ ವಿಧಾನಸೌಧ ರಾತ್ರಿ ವೇಳೆಯಲ್ಲೂ ಬೆಳಕಿನ ವೈಭವದಿಂದ ಕಂಗೊಳಿಸಲಿದೆ. ಲೇಸರ್ ಮ್ಯಾಪಿಂಗ್ ಪ್ರದರ್ಶನವು ಪ್ರವಾಸಿಗರನ್ನು ಸೆಳೆಯುವುದರ ಜತೆಗೆ, ನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ.
