Homeಮನರಂಜನೆಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಹಿಂದೆ ನಟ ಧನ್ವೀರ್‌ ಕೈವಾಡ...!?

ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯದ ವಿಡಿಯೋ ವೈರಲ್‌ ಹಿಂದೆ ನಟ ಧನ್ವೀರ್‌ ಕೈವಾಡ…!?

ಬೆಂಗಳೂರು,ನ.5-ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್‌ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಆ ವಿಡಿಯೋ ವೈರಲ್‌ ಮಾಡುವಲ್ಲಿ ಧನ್ವೀರ್‌ ಅವರ ಮೊಬೈಲ್‌ ಬಳಕೆಯಾಗಿರುವ ಸಾಕ್ಷ್ಯ ಲಭ್ಯವಾಗಿದೆ. ಈ ಸಂಬಂಧ ಸಿಸಿಬಿ ಪೊಲೀಸರಿಗೆ ಮೊಬೈಲ್‌ ರಿಟ್ರೀವ್‌ ವರದಿ ಕೈ ಸೇರಿದೆ.

ವಿಡಿಯೋ ವೈರಲ್‌ ಮಾಡಿದ ಆರೋಪದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಧನ್ವೀರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.ಈ ವೇಳೆ ಅವರ ಮೊಬೈಲ್‌ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್‌ನ್ನು ಎಫ್‌ಎಸ್‌‍ಎಲ್‌ಗೆ ಕಳುಹಿಸಿ, ಅಳಿಸಲಾದ ಡೇಟಾವನ್ನು ಮರುಪಡೆಯಲು ಪೊಲೀಸರು ಮುಂದಾಗಿದ್ದರು.

ಇದೀಗ ಧನ್ವೀರ್‌ ಮೊಬೈಲ್‌ ರಿಟ್ರೀವ್‌ ವರದಿ ಸಿಸಿಬಿ ಪೊಲೀಸರ ಕೈ ಸೇರಿದ್ದು, ಬಲವಾದ ಸಾಕ್ಷ್ಯಗಳು ಸಿಕ್ಕಿವೆ. ಈ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಆತನ ಬಂಧನ ವಾರೆಂಟ್‌ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡುತ್ತಿದ್ದಾರೆಂಬ ವಿಡಿಯೋ ವೈರಲ್‌ ಆಗಿದ್ದರ ಹಿಂದೆ ನಟ ಧನ್ವೀರ್‌ ಪಾತ್ರ ಇರುವ ಮಹತ್ವದ ಸಾಕ್ಷ್ಯಗಳು ಲಭಿಸಿವೆ. ಧನ್ವೀರ್‌ ಅವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಜೈಲಿನ ಒಳಗಿನ ವಿಡಿಯೋ ಶೇರ್‌ ಮಾಡಿದ್ದರಾ? ಎಂಬುದರ ಮೇಲೆ ತನಿಖೆ ನಡೆಯುತ್ತಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಆಪ್ತರಲ್ಲಿ ಗುರುತಿಸಿಕೊಂಡ ನಟ ಧನ್ವೀರ್‌ ಗೌಡ ಮತ್ತು ವಿಜಯಲಕ್ಷೀ ದರ್ಶನ್‌ ಅವರ ಮಧ್ಯದ ಜಗಳ ತಾರಕಕ್ಕೇರಿದೆ.

ಇತ್ತೀಚೆಗೆ ವಿಜಯಲಕ್ಷೀ ಅವರು ಧನ್ವೀರ್‌ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಬೆನ್ನಲ್ಲೆ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋ ವೈರಲ್‌ ಮಾಡಿದ್ದರ ಹಿಂದೆ ನಟ ಧನ್ವೀರ್‌ ಕೈವಾಡ ಇರುವುದಾಗಿ ತಿಳಿದು ಬಂದಿದೆ.
2026 ರ ನವಂಬರ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಜುಹಾದ್‌ ಹಮೀದ್‌, ವಿಕತ ಕಾಮಿ ಉಮೇಶ್‌ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಾಣೆ ಆರೋಪಿ ತರುಣ್‌ ಮೊಬೈಲ್‌ ಬಳಸುತ್ತಿರುವ ವಿಡಿಯೋ ವೈರಲ್‌ ಆಗಿತ್ತು.

ಈ ಕುರಿತು ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ವಿಡಿಯೋಗಳ ಹಿಂದೆ ದರ್ಶನ್‌ ಆಪ್ತ ನಟ ಧನ್ವೀರ್‌ ಗೌಡ ಅವರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದರು.ಇದೀಗ ಧನ್ವೀರ್‌ನ ಮೊಬೈಲ್‌ ರಿಟ್ರೀವ್‌ ವರದಿಯಲ್ಲಿ ಸಾಕ್ಷ್ಯ ಲಭ್ಯವಾಗಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಮೂರು ಎಫ್‌ಐಆರ್‌: ಪಶ್ಚಿಮ ವಿಭಾಗದ ಚಾಮರಾಜಪೇಟೆ, ಆರ್‌ಆರ್‌ನಗರ, ಬಸವೇಶ್ವರ ನಗರ ಪೊಲೀಸ್‌‍ ಠಾಣೆಗಳಲ್ಲಿ ಧನ್ವೀರ್‌ ವಿರುದ್ಧ ಪ್ರತ್ಯೇಕ 3 ಎಫ್‌ಐಆರ್‌ಗಳು ದಾಖಲಾದರೇ, ಬ್ಯಾಟರಾಯನಪುರದಲ್ಲಿ ಎನ್‌ಸಿಆರ್‌ ದಾಖಲಾಗಿದೆ.ಈ ಮೂರು ಠಾಣೆಗಳ ಪೊಲೀಸರು ಧನ್ವೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದಾರೆ.

RELATED ARTICLES

Latest News