ಬೆಂಗಳೂರು, ನ.5- ಪ್ರತಿ ಟನ್ ಕಬ್ಬಿಗೆ 6 ಸಾವಿರ ರೂಪಾಯಿ ದರ ನೀಡಬೇಕು, ಕೆಜಿ ಸಕ್ಕರೆಗೆ 60 ರೂಪಾಯಿ ಗರಿಷ್ಠ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ, ಹಿಂಡಲಗಾ ಜೈಲ್ ಬರೋ ನಡೆಸಿದ್ದ ರೈತರನ್ನು ಪೊಲೀಸರು ಬೆಳಗಾವಿ ಹೊರ ವಲಯದ ಮುಕ್ತಿ ಮಠದ ಬಳಿಯೇ ತಡೆದಿದ್ದಾರೆ.
ಇಂದು ಜೈಲು ಆರಂಭಿಸಿದ ರೈತರನ್ನು ಪೊಲಿಸರು, ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಮುಕ್ತಿಮಠದಿಂದ ಹಿಂಡಲಗಾ ಜೈಲಿನವರೆಗೆ ಪಾದಯಾತ್ರೆ ನಡೆಸಲು ರೈತರು ಸಜ್ಜಾಗಿದ್ದರು. ಆದರೆ, ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮುಕ್ತಿಮಠದ ಬಳಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪಾದಯಾತ್ರೆ ಆರಂಭಕ್ಕೂ ಮುನ್ನವೇ ಪೊಲೀಸರು ರೈತರನ್ನು ತಡೆದು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು.
ಬಳಿಕ ಪೊಲೀಸರು ಬಲವಂತವಾಗಿ ನೂರಾರು ರೈತರನ್ನು ವಶಕ್ಕೆ ಪಡೆದಿದ್ದು, ಹೋರಾಟದ ನೇತೃತ್ವ ವಹಿಸಿದ್ದ ಚೂನಪ್ಪ ಪೂಜಾರಿಯನ್ನೂ ಬಂಧಿಸಿದ್ದಾರೆ.ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಚೂನಪ್ಪ ಪೂಜಾರಿ, ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು. ಪೊಲೀಸರು ನಮ್ಮನ್ನು ವಶಕ್ಕೆ ಪಡೆದ ಮಾತ್ರಕ್ಕೆ ಹೋರಾಟ ನಿಲ್ಲುವುದಿಲ್ಲ. ರೈತರು ವಿವಿಧೆಡೆ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದು ಕರೆ ನೀಡಿದರು. ಜೈಲ್ ಭರೋ ಚಳವಳಿ ಆರಂಭಕ್ಕೂ ಮುನ್ನವೇ ರೈತರನ್ನು ವಶಕ್ಕೆ ಪಡೆದಿರುವ ಪೊಲೀಸರ ಕ್ರಮದಿಂದ ಮುಕ್ತಿಮಠದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹಿನ್ನೆಲೆ:
ಕಳೆದ 20 ದಿನಗಳಿಂದಲೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದಿರುವ ರೈತರು ಕಬ್ಬು ಅರೆಯಲು ಅವಕಾಶ ನೀಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 1000 ಬೆಂಬಲ ಬೆಲೆ ಘೋಷಣೆ ಮಾಡಬೇಕು, ಕೇಂದ್ರ ಸರ್ಕಾರ 6 ಸಾವಿರ ರೂಪಾಯಿ ಎಂಆರ್ಪಿ ದರ ನಿಗದಿ ಪಡಿಸಬೇಕು, ಎಥೆನಾಲ್ ಅನ್ನೂ ಸಂಪೂರ್ಣವಾಗಿ ಖರೀದಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿದ್ದವು.
ಆರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ರೈತ ಮುಖಂಡರ ಜೊತೆ ದೆಹಲಿಯಲ್ಲಿ ಸಭೆ ನಡೆಸಿದರು. ಆದರೆ ಅದು ಫಲ ನೀಡಲಿಲ್ಲ. ಬೆಳೆಗಾರರು ಹೆದ್ಧಾರಿ ತಡೆದು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆಗಳ ನಡುವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಧಾವಿಸಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಚರ್ಚೆ ನಡೆಸಿದರು. ಎರಡು ಬಾರಿ ಮುಖ್ಯಮಂತ್ರಿಗಳ ಸಭೆಯೂ ಫಲ ನೀಡದೆ ರೈತರು ಪಾದ ಯಾತ್ರೆ ಆರಂಭಿಸಿದರು.
ಕಳೆದ ಒಂದು ವಾರದಿಂದ ನಡೆಯುತ್ತಿರುವ ಪಾದಯಾತ್ರೆ ಕೊನೆಯಾಗದಲ್ಲಿಇಂದು ಜೈಲ್ಭರೋ ಯೋಜಿಸಲಾಗಿತ್ತು. ರೈತರು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ರೈತರನ್ನು ಬೆಳಗಾವಿಯ ಹೊರ ವಲಯದಲ್ಲೇ ತಡೆದಿದ್ದಾರೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಸತೀಸ್ ಜಾರಕಿಹೊಳಿ ನಡೆಸಿದ ಸರಣಿ ಸಭೆಯಲ್ಲಿ ಕಾರ್ಖಾನೆಗಳ ಮಾಲೀಕರು ಪ್ರತಿಟನ್ ಕಬ್ಬಿಗೆ 3600 ದರ ನೀಡಲು ಸಮ್ಮತಿದ್ದಾರೆ. ರೈತರು ಕನಿಷ್ಠ 3650 ರೂಪಾಯಿಗಳನ್ನಾದರೂ ನೀಡಲೇಬೇಕು ಎಂದು ಪಟ್ಟು ಹಿಡಿದ್ದಾರೆ. 50 ರೂಪಾಯಿಯಲ್ಲಿ ವ್ಯತ್ಯಾಸಗಳಾಗಿವೆ.
ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ರಾಜ್ಯ ಸರ್ಕಾರ ಕಬ್ಬು ಉತ್ಪನ್ನದಿಂದ ಹೊರಬರುವ ಸ್ಪೀರಿಟ್ನಿಂದ ರಾಜ್ಯ ಸರ್ಕಾರ 50 ರಿಂದ 60 ಸಾವಿರ ತೆರಿಗೆ ಪಡೆಯುತ್ತಿದೆ. ಅದರಲ್ಲಿ ಪ್ರತಿ ಟನ್ ಕಬ್ಬಿಗೆ ಒಂದು ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಲಿ. ಕೇಂದ್ರ ಸರ್ಕಾರ ಕಬ್ಬಿಗೆ ರೂ.60 ಕನಿಷ್ಠ ಬೆಲೆಯನ್ನು ನಿಗದಿಪಡಿಸಬೇಕು. ಇದರಿಂದ ದೊರೆಯುವ ಹೆಚ್ಚುವರಿ ಲಾಭವನ್ನು ಕಾರ್ಖಾನೆಗಳ ಮಾಲೀಕರು ರೈತರಿಗೆ ಪಾವತಿಸಬೇಕು ಎಂದು ಪಟ್ಟು ಹಿಡಿದ್ದಾರೆ.
ಮೊದಲು ಕಂತಿನಲ್ಲಿ 3650ಗಳನ್ನು ಕಬ್ಬು ಪೂರೈಸಿದ ರೈತರಿಗೆ ತಕ್ಷಣ ಪಾವತಿಸಬೇಕು. ಸಕ್ಕರೆ ಮಾರಾಟದಿಂದ ದೊರೆಯುವ ಹೆಚ್ಚುವರಿ ಲಾಭವನ್ನು ಎರಡನೇ ಕಂತಿನಲ್ಲಿ ರೈತರಿಗೆ ವರ್ಗಾಯಿಸಲು ಜಿಲ್ಲಾಡಳಿತ, ರೈತ ಸಂಘಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಒಪ್ಪಂದವಾಗಬೇಕು. ಇಂದು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ಬಹಿರಂಗ ಘೋಷಣೆ ಮಾಡಿ, ಒಪ್ಪಂದ ಪತ್ರ ನೀಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಕಬ್ಬು ಅರಿಯಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ರೈತರು ಆರಂಭದಲ್ಲಿ ಪ್ರತಿಟನ್ ಕಬ್ಬಿಗೆ 6000 ಬೆಲೆಗಾಗಿ ಪಟ್ಟು ಹಿಡಿದಿದ್ದರು. ಅದು ಈಗ 3600 ರೂಪಾಯಿಗೆ ಬಂದು ನಿಂತಿದೆ. 50 ರೂಪಾಯಿಗಳ ವ್ಯತ್ಯಾಸ ಇದೆ. ಅದರ ಕುರಿತು ಚರ್ಚಿಸುವುದಾಗಿ ಹೇಳಿದರು. ಕೇಂದ್ರ ಸರ್ಕಾರ ಸಕ್ಕರೆ ಬೆಲೆಯನ್ನು ಹೆಚ್ಚಳ ಮಾಡಿಕೊಟ್ಟರೆ ಅದರಿಂದ ದೊರೆಯುವ ಲಾಭವನ್ನು ರೈತರಿಗೆ ಹಸ್ತಾಂತರಿಸಲು ಕಾರ್ಖಾನೆಗಳ ಮುಖಂಡರು ಮಾಲೀಕರು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲದೆ ಹೋದರೆ ರೈತರಿಗೂ ಮತ್ತು ಕಾರ್ಖಾನೆಗಳಿಗೂ ನಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
