ತಿರುವನಂತಪುರಂ,ನ.7- ರಾಹುಲ್ಗಾಂಧಿ ಒಬ್ಬ ವಂಚಕ, ಜನರನ್ನು ದಾರಿ ತಪ್ಪಿಸಲು ಪದೇಪದೇ ಸುಳ್ಳುಗಳನ್ನು ಹರಡುವ ವ್ಯಕ್ತಿ ಎಂದು ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ರಾಜೀವ್ ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜೀವ್ ಚಂದ್ರಶೇಖರ್ ರಾಹುಲ್ ಗಾಂಧಿ ಅವರ ರಾಜಕೀಯ ತಂತ್ರವು ಒಂದು ಸುಳ್ಳಿನಿಂದ ಮತ್ತೊಂದು ಸುಳ್ಳಿನತ್ತ ಸಾಗುವುದಾಗಿದೆ ಎಂದು ಟೀಕಿಸಿದ್ದಾರೆ.
ಒಂದು ಸುಳ್ಳು ಜನರ ನಡುವೆ ಸ್ವಲ್ಪವಾದರೂ ನಂಬಿಕೆ ಗಳಿಸುವವರೆಗೆ ಮತ್ತೊಂದು ಸುಳ್ಳನ್ನು ಹೇಳುತ್ತಾ ಹೋಗುವುದು ಅವರ ತಂತ್ರ. ಅಂತಿಮವಾಗಿ ಜನರು ಅವರ ಹೇಳಿಕೆಗಳಲ್ಲಿ ಸ್ವಲ್ಪವಾದರೂ ಸತ್ಯವಿರಬಹುದು ಎಂದು ನಂಬುವಂತಾಗುತ್ತದೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.
ನಾಜಿ ಪ್ರಚಾರಕ ಜೋಸೆಫ್ ಗೋಬೆಲ್ಸ್ ಅವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ಸುಳ್ಳನ್ನು ಪದೇಪದೇ ಪುನರಾವರ್ತಿಸಿದರೆ ಜನರು ಅದನ್ನೇ ಸತ್ಯವೆಂದು ನಂಬಲು ಆರಂಭಿಸುತ್ತಾರೆ ಎಂಬ ಮಾತನ್ನು ಪ್ರಸ್ತಾಪಿಸಿದ್ದಾರೆ.
ಇದೇ ರಾಹುಲ್ ಗಾಂಧಿ ಅವರ ರಾಜಕೀಯ ತಂತ್ರದ ಮೂಲವಾಗಿದೆ. ಅವರು ತಮ್ಮನ್ನೇ ತಾವು ಮೋಸಗೊಳಿಸಿಕೊಳ್ಳುತ್ತಿದ್ದಾರೆಯೇ ಅಥವಾ ಇಡೀ ದೇಶದ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬುದು ಪ್ರಶ್ನೆ ಎಂದು ಟೀಕಿಸಿದ್ದಾರೆ.ಅವರ ಇಂತಹ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧರಾಗಿರುವ ಭಾರತೀಯರ ಒಗ್ಗಟ್ಟಿನ ಸಂಕಲ್ಪವು ಇಂತಹ ಪ್ರಯತ್ನಗಳನ್ನು ಸೋಲಿಸಲಿದೆ ಎಂದು ಹೇಳಿದ್ದಾರೆ.
