ಬೆಂಗಳೂರು,ನ.7- ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಬಳಿ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.ಯಾದಗಿರಿಯ ನಿವಾಸಿಗಳಾದ ಗುರುರಾಜ್ (29), ರೆಡ್ಡಿ ರಾಥೋಡ್ (33), ಗೋವಿಂದ ಚವ್ಹಾಣ್ (28) ಮತ್ತು ಕುಮಾರ್ ರಾಥೋಡ್ (26) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ರಾತ್ರಿ 11.30 ರ ಸುಮಾರಿನಲ್ಲಿ ಚೆನ್ನೈ-ಸೂರತ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಕಾರು ಜೀವರ್ಗಿಯಿಂದ ಯಾದಗಿರಿ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಈ ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
