Homeರಾಜ್ಯನಾಳೆ ಮಹಾ ರಥೋತ್ಸವ : ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು

ನಾಳೆ ಮಹಾ ರಥೋತ್ಸವ : ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿರುವ ಭಕ್ತರ ದಂಡು

ಹನೂರು,ನ.9- ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಾದೇಶ್ವರ ಬೆಟ್ಟಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ನಾಳೆ ನಡೆಯಲಿರುವ ಮಹಾರಥೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿವೆ.

ದೀಪಾವಳಿ ಅಮಾವಾಸ್ಯೆ ಮಾದೇಶ್ವರ ಸ್ವಾಮಿಗೆ ಇಂದು ಬೆಳಗ್ಗೆ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ಮತ್ತಿತರ ಪೂಜಾ ಕಾರ್ಯಗಳು ನೆರವೇರಿದವು.ದೇವಾಲಯದ ಗರ್ಭಗುಡಿ ಹಾಗೂ ಆವರಣವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಜೊತೆಗೆ ದೇವಾಲಯದ ಗೋಪುರ ಹಾಗೂ ಸುತ್ತಮುತ್ತ ಅಳವಡಿಸಲಾಗಿದ್ದ ವಿದ್ಯುತ್‌ ದೀಪಲಂಕಾರ ಭಕ್ತರ ಗಮನ ಸೆಳೆದವು.

ನರಕ ಚತುರ್ದಶಿ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡಿನಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಶ್ರೀ ಮಾದೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಭಕ್ತರು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಹೂವು, ಹಣ್ಣು, ಕಾಯಿ, ಕರ್ಪೂರದೊಂದಿಗೆ ದೇವಾಲಯಕ್ಕೆ ಆಗಮಿಸಿ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಸಲ್ಲಿಸಿದರು. ವಿವಿಧ ಸೇವೆ, ಉತ್ಸವಗಳಲ್ಲಿ ಪಾಲ್ಗೊಂಡು ಭಕ್ತಿಯಿಂದ ದರ್ಶನ ಮಾಡಿದರು.

ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಮಂಡಳಿ, ಪೊಲೀಸ್‌‍ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು, ವಾಹನ ನಿಲುಗಡೆ, ಸರತಿ ಸಾಲಿನ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದರು.

ನರಕ ಚತುರ್ದಶಿಯಂದು ಮಾದೇಶ್ವರ ಸ್ವಾಮಿಯ ದರ್ಶನ ಮಾಡಿದರೆ ಎಲ್ಲಾ ಪಾಪಗಳು ನಿವಾರಣೆಯಾಗಿ, ಸುಖ, ಶಾಂತಿ, ಸಮೃದ್ಧಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಅದರಂತೆ ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೂ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.ದೀಪಾವಳಿ ಹಬ್ಬವು ಬೆಳಕಿನ ಹಬ್ಬ.

ಕತ್ತಲೆಯಿಂದ ಬೆಳಕಿನ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುವ ಹಬ್ಬ. ಮಾದೇಶ್ವರ ಬೆಟ್ಟದಲ್ಲಿ ಈ ಬೆಳಕಿನ ಹಬ್ಬವನ್ನು ಭಕ್ತರು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ಆಚರಿಸಿದರು. ನಾಳೆ ಬೆಳಗ್ಗೆ 9 ಗಂಟೆಗೆ ಮಹಾರಥೋತ್ಸವ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಾದಪ್ಪ ಸ್ವಾಮಿಯ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

RELATED ARTICLES

Latest News