ಬೇಲೂರು,ನ.9- ಒಂದೆರಡು ತಿಂಗಳಿಂದ ತಾಲೂಕಿನಿಂದ ನಾಪತ್ತೆಯಾಗಿದ್ದ ದೈತ್ಯ ಗಾತ್ರದ ಒಂಟಿ ಕಾಡಾನೆ ಭೀಮ, ಪುನ: ನಾಲ್ಕೈದು ದಿನಗಳಿಂದ ಬೇಲೂರಿನ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಒಂದೆಡೆಯಾದರೆ ಮತ್ತೊಂದೆಡೆ ಒಂಟಿ ಕಾಡಾನೆ ದೈತ್ಯ ಭೀಮನ ಓಡಾಟದಿಂದಾಗಿ ಬಿಕೋಡು-ಅರೇಹಳ್ಳಿ ಹೋಬಳಿಗಳ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.
ಜಗಬೋರನಹಳ್ಳಿ ಕಾಡಿನಲ್ಲಿ 50ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. ಆದರೆ ಮೊನ್ನೆ ಜಗಬೋರನಹಳ್ಳಿಯಲ್ಲಿ ಕಾಣಿಸಿ ಕೊಂಡಿದ್ದ ಭೀಮಾ ಆನೆ, ಹಿಂದಿನ ರಾತ್ರಿ ಈಚಲಹಳ್ಳಿ, ಕೌರಿ, ಗಂಗಾವರ ಗ್ರಾಮಗಳ ಮೂಲಕ ಕೋಗೋಡು ಗ್ರಾಮದಲ್ಲಿ ಬೀಡುಬಿಟ್ಟಿತ್ತು. ಆದರೆ ಈ ಬಾಗದಲ್ಲಿ ಬೀಡು ಬಿಟ್ಟಿದ್ದ ಎಲ್ಲ ಕಾಡಾನೆಗಳು ನಿನ್ನೆ ವಾಪಸ್ ಜಗಬೋರನಹಳ್ಳಿ ಕಾಡಿಗೆ ತೆರಳಿವೆ. ಇದರ ಜಾಡು ಹಿಡಿದ ಒಂಟಿ ಕಾಡಾನೆ ಭೀಮಾ, ನೇರವಾಗಿ ಜಗಬೋರನಹಳ್ಳಿಯತ್ತ ಹೋಗಿದೆ.
ಈ ಸಂದರ್ಭ ಗ್ರಾಮದ ಸಮೀಪ ಜನ ಓಡಾಡುತ್ತಿದ್ದ ಸ್ಥಳದಿಂದಲೇ ರಸ್ತೆಯಲ್ಲಿ ಹಸುಗಳಿದ್ದ ಪಕ್ಕದಲ್ಲೇ ಭೀಮಾ ಕಾಡಾನೆ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದೆ. ರಸ್ತೆ ಪಕ್ಕದಲ್ಲಿನ ಜಮೀನಿಗೆ ಅಳವಡಿಸಿದ್ದ ತಂತಿ ಬೇಲಿಯನ್ನು ಕಾಲಿನಿಂದ ಮುಟ್ಟಿ ವಿದ್ಯುತ್ ಸಂಪರ್ಕ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದ ನಂತರ ಬೇಲಿಯನ್ನು ಸೀಳಿಕೊಂಡು ಹೋಗಿ ಕಾಡಾನೆಗಳ ಹಿಂಡಿಗೆ ಸೇರಿಕೊಂಡಿದೆ.
ವಿಶೇಷವೆಂದರೆ ಕಳೆದ ವರ್ಷಇದೇ ನವೆಂಬರ್ ತಿಂಗಳಲ್ಲಿ ಜಗಬೋರನಹಳ್ಳಿ ಗ್ರಾಮದ ಸಮೀಪವೇ ಭೀಮಾ ಮತ್ತು ಕ್ಯಾಪ್ಟನ್ ಆನೆಗಳ ನಡುವೆ ದೊಡ್ಡ ಕಾಳಗವೇ ನಡೆದು, ಭೀಮಾ ಆನೆಯ ಎಡ ಭಾಗದ ದಂತ ನೆಲಕ್ಕುರುಳಿದ್ದು ಇನ್ನೂ ಮಾಸಿಲ್ಲ. ಈಗ ಮತ್ತೆ ಅದೇಜಗಬೋರನಹಳ್ಳಿ ಕಾಡಿನಲ್ಲಿ ಕಾಡಾನೆಗಳ ಗುಂಪಿನೊಂದಿಗೆ ಬೀಮಾ ಮತ್ತು ಕ್ಯಾಪ್ಟನ್ ಕಾಡಾನೆಗಳಿರುವುದರಿಂದ ಮತ್ತೆಲ್ಲಿ ಇವು ಜಗಳಕ್ಕೆ ನಿಲ್ಲತ್ತವೊ ಎಂಬ ಆತಂಕ ಎದುರಾಗಿದೆ.
ಕಳೆದ ಹತ್ತು ದಿನಗಳ ಹಿಂದಷ್ಟೆಇದೇ ಜಗಬೋರನಹಳ್ಳಿ ಗ್ರಾಮದಜಮೀನಿನ ಸಮೀಪವೇ ಎಡರು ಕಾಡಾನೆಗಳು ಕಾದಾಟ ನಡೆಸಿರುವುದು ಇನ್ನೂಕಣ್ ಮುಂದೆ ಇದೆ. ಜತೆಗೆ ಈಗ ಕಳೆದ ವರ್ಷ ಇದೇ ನವೆಂಬರ್ ತಿಂಗಳಲ್ಲಿ ದೈತ್ಯ ಗ್ರಾತ್ರದ ಭೀಮಾ ಹಾಗೂ ಕ್ಯಾಪ್ಟನ್ ಆನೆಗಳ ನಡುವೆ ಭೀಕರ ಕಾದಾಟ ನಡೆದು, ಗ್ರಾಮದ ದೇವರಾಜು ಎಂಬುವವರ ಮನೆಯ ಮುಂದೆ ಓಡಾಡಿ ಸಿಕ್ಕಿದ್ದನ್ನೆಲ್ಲ ನಾಶ ಪಡಿಸಿದ್ದವು. ಈ ಕಾಡಾನೆಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಬೇಕಾದ ಸಾಧ್ಯತೆಇದೆ.
