Homeರಾಜ್ಯಬೆಂಗಳೂರಲ್ಲಿ ದೀಪಾವಳಿ ಮೊದಲ ದಿನವೇ 50ಕ್ಕೂ ಮಂದಿ ಕಣ್ಣಿಗೆ ಹಾನಿ

ಬೆಂಗಳೂರಲ್ಲಿ ದೀಪಾವಳಿ ಮೊದಲ ದಿನವೇ 50ಕ್ಕೂ ಮಂದಿ ಕಣ್ಣಿಗೆ ಹಾನಿ

ಬೆಂಗಳೂರು, ನ.9- ಬೆಳಕಿನ ಹಬ್ಬ ದೀಪಾವಳಿ ಮೊದಲ ದಿನವೇ ಪ್ರತಿ ಬಾರಿಯಂತೆ ಈ ಬಾರಿಯೂ 50ಕ್ಕೂ ಹೆಚ್ಚು ಮಂದಿ ತಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳು ಹಲವರ ಬದುಕಿನಲ್ಲಿ ಕತ್ತಲು ಮೂಡಿಸಿವೆ. ರಸ್ತೆಯಲ್ಲಿ ಆಟವಾಡುತ್ತಿದ್ದ 12 ವರ್ಷದ ಬಾಲಕನ ಕಣ್ಣಿಗೆ ರಾಕೆಟ್‌ ಬಡಿದು, ಬಲಗಣ್ಣಿನ ದೃಷ್ಟಿಗೆ ಶೇ.80ರಷ್ಟು ಹಾನಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ದೊಡ್ಡಬಳ್ಳಾಪುರದ ಸುಜನ್‌ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ನಿನ್ನೆ ರಾತ್ರಿ ತನ್ನ ಏರಿಯಾದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಯಾರೋ ಸಿಡಿಸಿದ ರಾಕೆಟ್‌ ಪಟಾಕಿ ಬಾಲಕನ ಕಣ್ಣಿಗೆ ಬಡಿದಿದೆ. ಪರಿಣಾಮ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಬಲಗಣ್ಣಿನ ದೃಷ್ಟಿಗೆ ಶೇ.80ರಷ್ಟು ಹಾನಿಯಾಗಿದೆ ಎಂದು ತಿಳಿದುಬಂದಿದೆ.

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರೂ ದೃಷ್ಟಿ ಸಂಪೂರ್ಣವಾಗಿ ಮರಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಕುಟುಂಬಸ್ಥರನ್ನು ಆತಂಕಕ್ಕೀಡು ಮಾಡಿದೆ.ಮಗನ ಭವಿಷ್ಯದ ಬಗ್ಗೆ ಪೋಷಕರು ಕಣ್ಣೀರಿಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಬಾಲಕನ ತಂದೆ ಶಿವಶಂಕರ್‌ ಅವರು, ನಿನ್ನೆ ರಾತ್ರಿ ರಸ್ತೆ ಮೇಲೆ ಆಟವಾಡುತ್ತಿದ್ದಾಗ ಮಗನ ಕಣ್ಣಿಗೆ ಪಟಾಕಿ ಬಡಿದಿದೆ. ವೈದ್ಯರು ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ನಮ್ಮ ಮಗನ ಮುಂದಿನ ಭವಿಷ್ಯ ಏನು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಕಣ್ಣಿಗೆ ಹೆಚ್ಚು ಹಾನಿ;
ದೀಪಾವಳಿ ಮೊದಲ ದಿನವೇ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯವಾಗಿರುವ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳು ಹೆಚ್ಚಾಗಿ ಗಾಯಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ವತಃ ಪಟಾಕಿ ಸಿಡಿಸುವಾಗ ಮಾತ್ರವಲ್ಲದೆ, ಬೇರೆಯವರು ಸಿಡಿಸಿದ ಪಟಾಕಿಗಳಿಂದಲೂ ಹಲವರು ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಆಟವಾಡುವ ಮಕ್ಕಳು ಹಾಗೂ ಪಟಾಕಿ ಸಿಡಿಸುವ ಸ್ಥಳದ ಸಮೀಪದಲ್ಲಿರುವವರು ಹೆಚ್ಚಿನ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಕಣ್ಣಿನ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಏರಿಕೆ; ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿ ಅವಘಡಕ್ಕೆ ಸಂಬಂಧಿಸಿದಂತೆ ಹಲವಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ನಾರಾಯಣ ನೇತ್ರಾಲಯದಲ್ಲಿ 25 ಪ್ರಕರಣಗಳು, ಮಿಂಟೋ ಆಸ್ಪತ್ರೆಯಲ್ಲಿ 16 ಪ್ರಕರಣಗಳು, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 2 ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

ಮಿಂಟೋ ಆಸ್ಪತ್ರೆಯಲ್ಲಿ ಗಾಯಾಳುಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 7 ವಯಸ್ಕರು ಹಾಗೂ 13 ಮಕ್ಕಳು ಸೇರಿದಂತೆ ಒಟ್ಟು 20 ಮಂದಿಗೆ ಕಣ್ಣಿನ ಹಾನಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇವರಲ್ಲಿ 17 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, ಉಳಿದವರು ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ದೀಪಾವಳಿಯ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಳ್ಳುವ ಆತಂಕ ಎದುರಾಗಿದೆ. ಕ್ಷಣಿಕ ಸಂಭ್ರಮಕ್ಕಾಗಿ ಮಾಡುವ ಅಜಾಗರೂಕತೆ ಮಕ್ಕಳ ಭವಿಷ್ಯವನ್ನೇ ಕತ್ತಲೆಗೆ ತಳ್ಳುವ ಸಾಧ್ಯತೆಯಿದೆ. ಹೀಗಾಗಿ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸುವುದು, ಮಕ್ಕಳನ್ನು ಪಟಾಕಿಗಳಿಂದ ದೂರವಿಡುವುದು ಹಾಗೂ ಇತರರು ಪಟಾಕಿ ಸಿಡಿಸುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ.

RELATED ARTICLES

Latest News