ಬೆಂಗಳೂರು,ಏ.18- ಕಲಬುರಗಿಯಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಅಗ್ರಿಕಲ್ಚರ್ ಹಬ್ ಮಾಡುವುದಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ತಿಳಿಸುವ ಮೂಲಕ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆಯವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಿಯೋಗ ಒತ್ತಾಯಿಸಿದೆ.
ಈ ಕುರಿತು ಇಂದು ಬಿಜೆಪಿ ನಿಯೋಗವು ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ನೀಡಿದೆ.ಮತದಾರರಿಗೆ ಬೆದರಿಕೆ ಹಾಕಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡುವಂತೆ ಹೇಳುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇನ್ನೊಂದು ದೂರು ಕೊಡಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಅವರ ಹೆಸರನ್ನು ತೆಗೆಯುವಂತೆ ಸೂಚಿಸಲು ಆಗ್ರಹಿಸಲಾಯಿತು.
ಕುಣಿಗಲ್ ತಾಲ್ಲೂಕಿನ ಚಿಕ್ಕ ಅರ್ಜೇನಹಳ್ಳಿ ಗ್ರಾಮದ ಪ್ರೇಮ್ ಕುಮಾರ್ ಬಿನ್ ಪಿ.ಜಿ.ರಾಮಯ್ಯರವರ ತೋಟಕ್ಕೆ ರಾಜಕೀಯ ವೈಷಮ್ಯದ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ. ಈ ಘಟನೆಗೆ ಕಾರಣಕರ್ತರಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನೊಂದಿರುವ ಪ್ರೇಮ್ ಕುಮಾರ್ ಅವರಿಗೆ ಭದ್ರತೆ ಕೊಡಬೇಕು. ಸುಳ್ಳು ಹೇಳಿಕೆಗೆ ಸಹಿ ಹಾಕಿಸಿಕೊಂಡ ಪೊಲೀಸ್ ಅಧಿಕಾರಿಗಳು, ಪೊಲೀಸರನ್ನು ಅಮಾನತುಪಡಿಸಲು ಒತ್ತಾಯಿಸಿ ದೂರು ಕೊಡಲಾಯಿತು.
ಕುಣಿಗಲ್ ವಿಧಾನಸಭಾ ಕ್ಷೇತ್ರದ ಎಲ್ಲ ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಬೇಕು. ಬೆಂಗಳೂರು ಗ್ರಾಮಾಂತರ ಮತ ಕ್ಷೇತ್ರಕ್ಕೆ ಅರೆ ಸೇನಾಪಡೆಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸಲ್ಲಿಸುವ ನಿಯೋಗದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ್, ರಾಜ್ಯ ವಕ್ತಾರ ಮೋಹನ್ ವಿಶ್ವ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್, ಸದಸ್ಯ ಯಶವಂತ್ ಮತ್ತು ಪಕ್ಷದ ಪ್ರಮುಖರು ಇದ್ದರು.