Homeಜಿಲ್ಲಾ ಸುದ್ದಿಗಳುಕೊಲೆಯಾಗಿದ್ದ ಮಹಿಳೆ ಜೀವಂತ ಪ್ರತ್ಯಕ್ಷ..! : ಮಾಡದ ತಪ್ಪಿಗೆ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ ಯುವಕ

ಕೊಲೆಯಾಗಿದ್ದ ಮಹಿಳೆ ಜೀವಂತ ಪ್ರತ್ಯಕ್ಷ..! : ಮಾಡದ ತಪ್ಪಿಗೆ ಎರಡೂವರೆ ವರ್ಷ ಜೈಲುವಾಸ ಅನುಭವಿಸಿದ ಯುವಕ

ಮಂಡ್ಯ, ನ.13- ಕೊಲೆಯಾಗಿದ್ದಾಳೆ ಎಂದು ಭಾವಿಸಿ ಕೊಲೆ ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರು ಇದೀಗ ಜೀವಂತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕೊಲೆ ಆರೋಪ ಎದುರಿಸಿ ನಿರಪರಾಧಿ ಯುವಕನೊಬ್ಬ ಎರಡೂವರೆ ವರ್ಷ ಜೈಲುವಾಸ ಅನುಭವಿಸಿರುವುದು ಪೊಲೀಸ್‌‍ ತನಿಖೆಯ ಲೋಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2019ರಲ್ಲಿ ಪಾಂಡವಪುರ ಪಟ್ಟಣದಿಂದ ಮಂಜು ಅಲಿಯಾಸ್‌‍ ಸುಮಾ ನಾಪತ್ತೆಯಾಗಿದ್ದ ಬಗ್ಗೆ ಅವರ ತಂದೆ ನಾಗರಾಜು ದೂರು ನೀಡಿದ್ದರು. ಬಳಿಕ ಪಾಂಡವಪುರದ ರಾಗಿಮುದ್ದನಹಳ್ಳಿ ನಿವಾಸಿ ರಾಜೇಶ್‌ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ನಾಪತ್ತೆಯಾಗುವ ಮುನ್ನ ಸುಮಾ ಅವರು ಬಸ್‌‍ ನಿಲ್ದಾಣದಲ್ಲಿ ಆಕಸಿಕವಾಗಿ ಪರಿಚಯವಾದ ರಾಜೇಶ್‌ ಅವರ ಮೊಬೈಲ್‌ನಿಂದ ಕೊನೆಯ ಕರೆ ಮಾಡಿದ್ದೇ ಆರೋಪಕ್ಕೆ ಪ್ರಮುಖ ಆಧಾರವಾಗಿತ್ತು ಎನ್ನಲಾಗಿದೆ.

ಪೊಲೀಸರು ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. 2021ರಲ್ಲಿ ಜೈಲು ಸೇರಿದ್ದ ರಾಜೇಶ್‌, ಎರಡೂವರೆ ವರ್ಷಗಳ ಬಳಿಕ 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದೀಗ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಸುಮಾ ಜೀವಂತವಾಗಿರುವುದು ಪತ್ತೆಯಾಗಿದೆ. ಇಷ್ಟವಿಲ್ಲದ ಮದುವೆಯ ಕಾರಣ ಮನೆ ಬಿಟ್ಟು ಹೋಗಿದ್ದೆ. ರಾಜೇಶ್‌ ಪರಿಚಯವಿಲ್ಲ, ಅವರ ಮೊಬೈಲ್‌ನಿಂದ ಆಕಸ್ಮಿಕವಾಗಿ ಕರೆ ಮಾಡಿದ್ದೆ ಅಷ್ಟೇ ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಂಡ್ಯ ಎಸ್ಪಿ ಡಾ. ಶೋಭರಾಣಿ, ಮಹಿಳೆ ಪತ್ತೆಯಾಗಿದ್ದು, ಅವರ ಹೇಳಿಕೆ ಪಡೆದು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಹಿಂದಿನ ತನಿಖೆಯಲ್ಲಿನ ಲೋಪಗಳ ಕುರಿತು ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

Latest News