Homeರಾಷ್ಟ್ರೀಯಟಿಬಿ ನಿರ್ಮೂಲನೆ ಹೋರಾಟದಲ್ಲಿ ಭಾರತಕ್ಕೆ ಮಹತ್ವದ ಸಾಧನೆ; ಸಾವಿನ ಪ್ರಮಾಣ ಶೇ.38ರಷ್ಟು ಇಳಿಕೆ

ಟಿಬಿ ನಿರ್ಮೂಲನೆ ಹೋರಾಟದಲ್ಲಿ ಭಾರತಕ್ಕೆ ಮಹತ್ವದ ಸಾಧನೆ; ಸಾವಿನ ಪ್ರಮಾಣ ಶೇ.38ರಷ್ಟು ಇಳಿಕೆ

ನವದೆಹಲಿ, ನ.13- ಭಾರತವು ಕ್ಷಯರೋಗ (ಟಿಬಿ) ನಿರ್ಮೂಲನೆ ಹೋರಾಟದಲ್ಲಿ ಮಹತ್ವದ ಸಾಧನೆ ಮಾಡಿದ್ದು, 2015ರಿಂದ ಟಿಬಿ ಸಾವಿನ ಪ್ರಮಾಣ ಶೇ.38ರಷ್ಟು ಕಡಿಮೆಯಾಗಿದೆ.ಇದೇ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಮಾಣ ಶೇ.35ರಷ್ಟು ಇಳಿಕೆಯಾಗಿದೆ. ಅಲ್ಲದೆ, ಔಷಧಿಗೆ ಸ್ಪಂದಿಸುವ ಟಿಬಿ ರೋಗಿಗಳಲ್ಲಿ ಶೇ.94ರಷ್ಟು ಚಿಕಿತ್ಸಾ ಯಶಸ್ಸು ದಾಖಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬಿಡುಗಡೆ ಮಾಡಿರುವ 2026ರ ಜಾಗತಿಕ ಕ್ಷಯರೋಗ ವರದಿ ತಿಳಿಸಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಆರಂಭಿಕ ಪತ್ತೆ, ತ್ವರಿತ ಚಿಕಿತ್ಸೆ, ತಂತ್ರಜ್ಞಾನದ ಬಳಕೆ ಹಾಗೂ ರೋಗಿಗಳಿಗೆ ಸಮಗ್ರ ಆರೈಕೆ ಒದಗಿಸುವ ಮೂಲಕ ಭಾರತ ಈ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ.

2015ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 28 ಟಿಬಿ ಸಾವುಗಳು ಸಂಭವಿಸುತ್ತಿದ್ದರೆ, 2025ರಲ್ಲಿ ಈ ಪ್ರಮಾಣ 18ಕ್ಕೆ ಇಳಿದಿದೆ. ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್‌), ಸಮುದಾಯ ಆಧಾರಿತ ಮರಣ ಸಮೀಕ್ಷೆ ಹಾಗೂ ನಿಕ್ಷಯ್‌ ಪೋರ್ಟಲ್‌ನ ದತ್ತಾಂಶಗಳನ್ನು ಆಧರಿಸಿ ಡಬ್ಲ್ಯುಎಚ್‌ಒ ಈ ಅಂದಾಜು ಮಾಡಿದೆ.

ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಎಕ್ಸ್‌ರೇ ತಪಾಸಣೆ, ತ್ವರಿತ ರೋಗನಿರ್ಣಯ, ತಕ್ಷಣದ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಕ್ಷಯ್‌ ಪೋಷಣ್‌ ಯೋಜನೆ ಮತ್ತು ನಿಕ್ಷಯ್‌ ಮಿತ್ರ ಉಪಕ್ರಮಗಳು ರೋಗಿಗಳಿಗೆ ಆರ್ಥಿಕ ಹಾಗೂ ಪೌಷ್ಟಿಕ ಬೆಂಬಲ ನೀಡುತ್ತಿವೆ.

2024ರ ಡಿಸೆಂಬರ್‌ 7ರಿಂದ 2026ರ ನವೆಂಬರ್‌ 8ರವರೆಗೆ ದೇಶಾದ್ಯಂತ 25 ಕೋಟಿಗೂ ಅಧಿಕ ಜನರನ್ನು ಟಿಬಿ ತಪಾಸಣೆಗೆ ಒಳಪಡಿಸಲಾಗಿದೆ. 11 ಕೋಟಿಗೂ ಹೆಚ್ಚು ಎಕ್ಸ್‌ರೇ ಪರೀಕ್ಷೆ ನಡೆಸಲಾಗಿದ್ದು, 48.64 ಲಕ್ಷ ಹೊಸ ಟಿಬಿ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 14.97 ಲಕ್ಷ ಲಕ್ಷಣರಹಿತ ಪ್ರಕರಣಗಳೂ ಸೇರಿವೆ.

2025ರಲ್ಲಿ 67,933 ಪಂಚಾಯಿತಿಗಳನ್ನು ಟಿಬಿ ಮುಕ್ತ ಎಂದು ಘೋಷಿಸಲಾಗಿದೆ. ಟಿಬಿ ನಿರ್ಮೂಲನೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಶೇ.96ರಷ್ಟು ಅನುದಾನವನ್ನು ದೇಶೀಯ ಸಂಪನ್ಮೂಲಗಳಿಂದಲೇ ಒದಗಿಸಲಾಗುತ್ತಿದೆ. ಯುವಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಜೋಷ್‌ ತಂಡಗಳನ್ನು ರಚಿಸಲಾಗುತ್ತಿದ್ದು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಮೈ ಭಾರತ್‌ ಸ್ವಯಂಸೇವಕರು ಜಾಗೃತಿ ಹಾಗೂ ಸಮುದಾಯದ ಭಾಗವಹಿಸುವಿಕೆಗೆ ನೆರವಾಗುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ತಪಾಸಣೆ, ಗುಣಮಟ್ಟದ ಚಿಕಿತ್ಸೆ, ಪೌಷ್ಟಿಕ ನೆರವು ಮತ್ತು ಜನಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಮೂಲಕ ಟಿಬಿ ಮುಕ್ತ ಭಾರತದ ಗುರಿ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

RELATED ARTICLES

Latest News