ಬೆಂಗಳೂರು, ನ.13- ರಾಜ್ಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಪಾರ ದರ್ಶಕ ಹಾಗೂ ಶಿಕ್ಷಕಸ್ನೇಹಿಯಾಗಿ ಸುವ ಉದ್ದೇಶದಿಂದ ರಾಜ್ಯ ಸರ್ಕಾ ರವು ವರ್ಗಾವಣೆ ನಿಯಮಗಳಿಗೆ ತಿದ್ದುಪಡಿ ತಂದು ಕರಡು ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2026 ಎಂಬ ಹೆಸರಿನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು, ಶಿಕ್ಷಕರು ಹಾಗೂ ಸಂಬಂಧಪಟ್ಟವರು ತಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರಡು ನಿಯಮಗಳ ಪ್ರಕಾರ, ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಹಾಗೂ ಸರ್ಕಾರದ ಪ್ರಮುಖ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ನಿರ್ಣಾಯಕ ಹುದ್ದೆಗಳೆಂದು ಪರಿಗಣಿಸಿ, ಇತರ ಹುದ್ದೆಗಳಿಗಿಂತ ಮೊದಲ ಆದ್ಯತೆಯ ಮೇರೆಗೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಕೆಪಿಎಸ್ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ವರ್ಗಾವಣೆ ಸಂದರ್ಭದಲ್ಲಿ ಹೆಚ್ಚುವರಿ ಪ್ರೋತ್ಸಾಹಕ ಅಂಕಗಳನ್ನು ನೀಡುವ ಪ್ರಸ್ತಾವನೆಯೂ ಇದೆ. ಎ ವಲಯದಲ್ಲಿ ಸೇವೆ ಸಲ್ಲಿಸಿದವರಿಗೆ 2 ಅಂಕ, ಬಿ ವಲಯಕ್ಕೆ 4 ಅಂಕ ಹಾಗೂ ಸಿ ವಲಯಕ್ಕೆ 6 ಅಂಕಗಳನ್ನು ನೀಡಲು ಉದ್ದೇಶಿಸಲಾಗಿದೆ.
ತಾಲ್ಲೂಕು ಮಟ್ಟದಲ್ಲಿ ಖಾಲಿ ಹುದ್ದೆಗಳ ಆಧಾರದಲ್ಲಿ ವರ್ಗಾವಣೆ ಮಾಡುವ ಮಿತಿಯನ್ನು ಶೇ.25ಕ್ಕೆ ನಿಗದಿಪಡಿಸುವ ಮೂಲಕ ಹೆಚ್ಚಿನ ಶಿಕ್ಷಕರಿಗೆ ವರ್ಗಾವಣೆ ಅವಕಾಶ ಕಲ್ಪಿಸಲು ಪ್ರಸ್ತಾಪಿಸಲಾಗಿದೆ. ಆದರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಾಗೂ ವಿಶೇಷ ಚೇತನ ಶಿಕ್ಷಕರಿಗೆ ಈ ಮಿತಿಯಿಂದ ವಿನಾಯಿತಿ ನೀಡಲಾಗುತ್ತದೆ. ಹಿಂದಿನ ವರ್ಷ ಹೆಚ್ಚುವರಿ ವರ್ಗಾವಣೆ ಅಥವಾ ಬಡ್ತಿ ಪಡೆದ ಶಿಕ್ಷಕರಿಗೂ ಕೆಲವು ವಿಶೇಷ ವಿನಾಯಿತಿಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.
ಗರ್ಭಿಣಿ ಶಿಕ್ಷಕಿಯರು ಹಾಗೂ ಐದು ವರ್ಷದೊಳಗಿನ ಮಗುವನ್ನು ಹೊಂದಿರುವ ತಾಯಂದಿರಿಗೆ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಶೇಷ ರಿಯಾಯಿತಿ ನೀಡಲು ಕರಡು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರ ಪತಿ ಅಥವಾ ಪತ್ನಿ ಹಾಗೂ ಮಕ್ಕಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಟ್ಟಿ ಮಾಡಿರುವ ನಿರ್ದಿಷ್ಟ ಕಾಯಿಲೆಗಳಿದ್ದರೆ ಅಂತಹ ಪ್ರಕರಣಗಳಿಗೂ ವೈದ್ಯಕೀಯ ಆದ್ಯತೆ ನೀಡುವ ಕುರಿತು ಸ್ಪಷ್ಟ ನಿಯಮ ರೂಪಿಸಲಾಗಿದೆ. ವೈದ್ಯಕೀಯ ಕಾರಣಗಳ ಆಧಾರದಲ್ಲಿ ವರ್ಗಾವಣೆ ಕೋರುವವರ ಪ್ರಮಾಣಪತ್ರಗಳ ನೈಜತೆಯನ್ನು ವಿಭಾಗ ಮಟ್ಟದ ಸಮಿತಿಗಳು ಪರಿಶೀಲಿಸಲಿವೆ.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಶಿಕ್ಷಕರ ತರಬೇತಿ ಸಂಸ್ಥೆಗಳು ಸೇರಿದಂತೆ ಜಿಲ್ಲೆ, ವಿಭಾಗ ಹಾಗೂ ರಾಜ್ಯಮಟ್ಟದ ಹುದ್ದೆಗಳನ್ನೂ ವರ್ಗಾವಣೆ ಸಮಾಲೋಚನೆ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದೆ. ನಿರ್ಣಾಯಕ ಹುದ್ದೆಗಳು ಹಾಗೂ ವಿಶೇಷ ಆದ್ಯತೆಯ ಪ್ರಕರಣಗಳಲ್ಲಿ ತಾಲ್ಲೂಕು ಮಟ್ಟದ ಶೇ.25ರ ಖಾಲಿ ಹುದ್ದೆಗಳ ಮಿತಿಯನ್ನು ಅನ್ವಯಿಸದಿರಲು ಅವಕಾಶ ಕಲ್ಪಿಸಲಾಗಿದೆ.
ಡಯಟ್ ಹಾಗೂ ರಾಜ್ಯಮಟ್ಟದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಕನಿಷ್ಠ 12 ವರ್ಷಗಳ ಸೇವಾನುಭವ ಕಡ್ಡಾಯಗೊಳಿಸಲು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಹುದ್ದೆಗಳಿಗೆ ವರ್ಗಾವಣೆಯಾಗಿ ಹೋದವರು ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಬೇಕು. ನಂತರ ಕಡ್ಡಾಯ ವರ್ಗಾವಣೆಗೆ ಒಳಪಡಲಿದ್ದಾರೆ.
ಇದೇ ವೇಳೆ ಕೆಪಿಎಸ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ನಿರಂತರತೆ ಹಾಗೂ ಶಾಲೆಗಳ ಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಕನಿಷ್ಠ ಒಂಬತ್ತು ವರ್ಷಗಳ ಸೇವಾವಧಿಯನ್ನು ನಿಗದಿಪಡಿಸುವ ಪ್ರಸ್ತಾವನೆಯೂ ಇದೆ.ಒಟ್ಟಾರೆ, ಶಿಕ್ಷಕರ ವರ್ಗಾವಣೆಯಲ್ಲಿ ಆದ್ಯತೆ, ವೈದ್ಯಕೀಯ ಕಾರಣಗಳು, ಮಹಿಳಾ ಶಿಕ್ಷಕಿಯರ ಕುಟುಂಬ ಪರಿಸ್ಥಿತಿ ಹಾಗೂ ಕೆಪಿಎಸ್ ಶಾಲೆಗಳಲ್ಲಿನ ಶಿಕ್ಷಕರ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ. ಸದ್ಯ ಇವು ಕರಡು ನಿಯಮಗಳಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿದ ಬಳಿಕ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
