Homeರಾಷ್ಟ್ರೀಯಇಂದಿನಿಂದ ಶಬರಿಮಲೆ 'ಮಂಡಲ ಯಾತ್ರೆ' ಆರಂಭ

ಇಂದಿನಿಂದ ಶಬರಿಮಲೆ ‘ಮಂಡಲ ಯಾತ್ರೆ’ ಆರಂಭ

ಶಬರಿಮಲೆ, ನ.16- ವಾರ್ಷಿಕ ಮಂಡಲ ಯಾತ್ರೆ ಇಂದು ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸಂಜೆ 5 ಗಂಟೆಗೆ ತೆರೆಯಲಾಗುತ್ತದೆ.ನಿರ್ಗಮಿತ ಪ್ರಧಾನ ಅರ್ಚಕ (ಮೇಲ್ಶಾಂತಿ) ಇ.ಡಿ. ಪ್ರಸಾದ್‌ ನಂಬೂದಿರಿ ಅವರು ತಂತ್ರಿ ಕಂಡರು ಬ್ರಹದತ್ತನ್‌ ಅವರ ಸಮುಖದಲ್ಲಿ ದೇವಸ್ಥಾನದ ಬಾಗಿಲು ತೆರೆದು ಸಾಂಪ್ರದಾಯಿಕ ದೀಪ ಬೆಳಗಿಸಲಿದ್ದಾರೆ.

ಬಳಿಕ ಅವರು 18 ಪವಿತ್ರ ಮೆಟ್ಟಿಲುಗಳನ್ನು ಇಳಿದು, ಪವಿತ್ರ ಅಗ್ನಿ (ಆಳಿ) ಬೆಳಗಿಸಿ, ನೂತನವಾಗಿ ನೇಮಕಗೊಂಡ ಪ್ರಧಾನ ಅರ್ಚಕರನ್ನು ಸನ್ನಿಧಾನಕ್ಕೆ ಕರೆತರುತ್ತಾರೆ.ಸಂಜೆ ಸುಮಾರು 6.30ಕ್ಕೆ ತಂತ್ರಿಗಳು ಶಬರಿಮಲೆಯ ನೂತನ ಪ್ರಧಾನ ಅರ್ಚಕ ಅರೆಕ್ಕರ ಸುಬ್ರಮಣಿಯನ್‌ ಶಂಕರನ್‌ ನಂಬೂದಿರಿ ಅವರ ಪಟ್ಟಾಭಿಷೇಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಇದೇ ರೀತಿ ಮಲಿಕಪ್ಪುರಂ ದೇವಸ್ಥಾನದಲ್ಲಿಯೂ ಎ. ದಾಮೋದರನ್‌ ನಂಬೂದಿರಿ ಅವರನ್ನು ನೂತನ ಪ್ರಧಾನ ಅರ್ಚಕರನ್ನಾಗಿ ನೇಮಿಸುವ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.ಬೇರೆ ಯಾವುದೇ ವಿಶೇಷ ಪೂಜೆಗಳು ನಿಗದಿಯಾಗಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಮುಂಜಾನೆ 3 ಗಂಟೆಗೆ ನೂತನ ಪ್ರಧಾನ ಅರ್ಚಕರು ಶಬರಿಮಲೆ ಮತ್ತು ಮಲಿಕಪ್ಪುರಂ ದೇವಸ್ಥಾನಗಳ ಬಾಗಿಲು ತೆರೆದ ಬಳಿಕ ಅಧಿಕೃತವಾಗಿ ಮಂಡಲ ಯಾತ್ರೆ ಆರಂಭವಾಗಲಿದೆ ಕೋಟ್ಯಾಂತರ ಭಕ್ತರು ಸನ್ನಿದಾನಕ್ಕೆ ಭೇಟಿ ನೀಡಿಸ್ವಾಮಿ ಅಯ್ಯಪ್ಪ ನ ದರ್ಶನ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಸೆಂಬರ್‌ 27ರಂದು ಮಂಡಲ ಪೂಜೆ ನಡೆಯಲಿದ್ದು, ಬಳಿಕ ದೇವಸ್ಥಾನವನ್ನು ಅಂದಿನ ಮಟ್ಟಿಗೆ ಮುಚ್ಚಲಾಗುತ್ತದೆ. ಡಿಸೆಂಬರ್‌ 30ರಂದು ಸಂಜೆ 5 ಗಂಟೆಗೆ ಮಕರವಿಳಕ್ಕು ಯಾತ್ರೆಗಾಗಿ ದೇವಸ್ಥಾನವನ್ನು ಮತ್ತೆ ತೆರೆಯಲಾಗುತ್ತದೆ.

ಮಕರವಿಳಕ್ಕು ಉತ್ಸವವು ಜನವರಿ 14ರಂದು ನಡೆಯಲಿದೆ. ಭಕ್ತರಿಗೆ ಜನವರಿ 19ರವರೆಗೆ ದೇವರ ದರ್ಶನಕ್ಕೆ ಅವಕಾಶವಿದ್ದು, ಜನವರಿ 20ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಪ್ರತಿದಿನ ಗರಿಷ್ಠ 80,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್‌‍ ಮೂಲಕ ಮುಂಗಡ ನೋಂದಣಿ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News