ಬಾಲಿ, ನ. 16 (ಪಿಟಿಐ): ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಜಯ್ ಶಾ ಅವರನ್ನು ಎರಡನೇ ಅವಧಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಮರುನೇಮಕ ಮಾಡಲಾಗಿದೆ. ಕ್ರೀಡೆಯ ಪಾಲಿಗೆ ಇದೊಂದು ನಿರ್ಣಾಯಕ ಘಟ್ಟವಾಗಿದ್ದು, ಈ ಸಮಯದಲ್ಲಿ ಆಡಳಿತದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಆಯ್ಕೆಯಾಗುವ ಮೊದಲು ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ 38 ವರ್ಷದ ಜಯ್ ಶಾ, 2024ರ ಡಿಸೆಂಬರ್ನಲ್ಲಿ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇಲ್ಲಿ ಮುಕ್ತಾಯ ಗೊಂಡ ಐಸಿಸಿ ಮಂಡಳಿಯ ಸಭೆಗಳಲ್ಲಿ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ನಿರ್ಧಾರವು ಜಯ್ ಶಾ ಅವರ ನಾಯಕತ್ವದ ಮೇಲೆ ಮಂಡಳಿಗಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಕ್ರೀಡೆಯ ಪಾಲಿಗೆ ಇದೊಂದು ನಿರ್ಣಾಯಕ ಘಟ್ಟವಾಗಿದ್ದು, ಜಾಗತಿಕ ವಿಸ್ತರಣೆ, ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ವಾಣಿಜ್ಯ ಅಭಿವೃದ್ಧಿಯು ಐಸಿಸಿಯ ಕಾರ್ಯತಂತ್ರದ ಮಾರ್ಗಸೂಚಿಯ ಪ್ರಮುಖ ಭಾಗಗಳಾಗಿವೆ. ಇಂತಹ ಸಮಯದಲ್ಲಿ ಈ ನೇಮಕವು ಆಡಳಿತದಲ್ಲಿ ನಿರಂತರತೆಯನ್ನು ಒದಗಿಸುತ್ತದೆ ಎಂದು ಐಸಿಸಿ ತಿಳಿಸಿದೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಮತ್ತೆ ಸೇರ್ಪಡೆಗೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಐಸಿಸಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿರುವ ಜಯ್ ಶಾ, ಐಸಿಸಿ ಮಂಡಳಿಯು ನನ್ನ ಮೇಲೆ ಇಟ್ಟಿರುವ ವಿಶ್ವಾಸದಿಂದ ನನಗೆ ಅಪಾರ ಗೌರವ ಭಾವನೆ ಮೂಡಿದೆ. ನನ್ನ ಮೇಲೆ ನಿರಂತರ ನಂಬಿಕೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ ಪ್ರತಿಯೊಬ್ಬ ನಿರ್ದೇಶಕರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
