ಶ್ರೀನಗರ, ನ.16- ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಲತೀಫ್ ಭಟ್ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಕಳೆದ ವಾರ ಇದೇ ಜಿಲ್ಲೆಯ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಲತೀಫ್ ಭಟ್ ಕೂಡ ಭಾಗಿಯಾಗಿದ್ದ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆ (ಎಸ್ಒಜಿ) ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಎನ್ಕೌಂಟರ್ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಕುಲ್ಗಾಮ್ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಸಿಆರ್ಪಿಎಫ್ ಶಿಬಿರದ ಮೇಲಿನ ದಾಳಿಯಲ್ಲಿ ಭಾಗಿ
ಕಳೆದ ನವೆಂಬರ್ 11ರಂದು ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಸಮೀಪದ ಭದ್ರತಾ ತಪಾಸಣಾ ಕೇಂದ್ರದಲ್ಲಿರುವ ಸಿಆರ್ಪಿಎಫ್ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಮಧ್ಯಾಹ್ನ ಸುಮಾರು 2.15ರ ವೇಳೆಗೆ ನಡೆದ ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ದಾಳಿ ನಡೆಸಿದ ಬಳಿಕ ಉಗ್ರರು ಸಮೀಪದ ಅರಣ್ಯ ಪ್ರದೇಶದತ್ತ ಪರಾರಿಯಾಗಿದ್ದರು.
ಈ ದಾಳಿಯ ಹೊಣೆಯನ್ನು ಪಸದಾರನ್-ಎ-ಹುರಿಯತ್ ಕಾಶ್ಮೀರ ಎಂಬ ಹೊಸ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಈ ಸಂಘಟನೆಯ ಹೆಸರು ಇದೇ ಮೊದಲ ಬಾರಿಗೆ ಕೇಳಿಬಂದಿದೆ. ನವೆಂಬರ್ 11ರಂದು ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸಂಘಟನೆಯು ಸಿಆರ್ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೇಳಿಕೊಂಡಿತ್ತು.
ಯಾರು ಈ ಲತೀಫ್ ಭಟ್?
ಲಷ್ಕರ್-ಎ-ತೊಯ್ಬಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ ಎಂದು ಮೂಲಗಳು ತಿಳಿಸಿವೆ.ಸಕ್ರಿಯ ಉಗ್ರನಾಗುವ ಮೊದಲು ಸುಮಾರು ಐದು ವರ್ಷಗಳ ಕಾಲ ದಕ್ಷಿಣ ಕಾಶ್ಮೀರದಲ್ಲಿ ಲಷ್ಕರ್ ಸಂಘಟನೆಯ ಓವರ್ಗ್ರೌಂಡ್ ಜಾಲದೊಂದಿಗೆ ಆತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಅನಂತನಾಗ್ನ ಲಾಲ್ ಚೌಕ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಹತ್ಯೆಯಾದ ಬಳಿಕ ಭದ್ರತಾ ಸಂಸ್ಥೆಗಳ ಕಣ್ಗಾವಲಿಗೆ ಲತೀಫ್ ಭಟ್ ಬಂದಿದ್ದ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ದಾಳಿಯ ಕಾರ್ಯತಂತ್ರ ಹಾಗೂ ಹಿಂದಿನ ಕೆಲವು ಉಗ್ರ ದಾಳಿಗಳ ಮಾದರಿಯಲ್ಲಿ ಸಾಮ್ಯತೆ ಕಂಡುಬಂದಿದ್ದು, ಈ ಪ್ರಕರಣದಲ್ಲೂ ಲತೀಫ್ ಭಟ್ ಪಾತ್ರವಿರುವ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದ್ದವು. ದಾಳಿಯ ಸಂದರ್ಭದಲ್ಲಿ ಆತನೊಂದಿಗೆ ಪಾಕಿಸ್ತಾನ ಮೂಲದ ಉಗ್ರನೊಬ್ಬ ಇದ್ದಿರಬಹುದು ಎಂಬ ಅನುಮಾನವನ್ನೂ ಭದ್ರತಾ ಮೂಲಗಳು ವ್ಯಕ್ತಪಡಿಸಿವೆ.
